ಗದಗ : ಬರಗಾಲ ಸಂದರ್ಭದ ಗಾಂಭೀರ್ಯತೆ ಅರಿತು ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ಬರ ನಿರ್ವಹಣೆ ಕುರಿತ ಸಭೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಮುಂದಿನ ಎರಡು ಮೂರು ತಿಂಗಳ ಅವಧಿಯಲ್ಲಿ ಜನಸಾಮಾನ್ಯರಿಗೆ ಜಾನುವಾರುಗಳಿಗೆ ನೀರು, ಮೇವಿನ ಸಮಸ್ಯೆ ತಲೆದೂರಿದಲ್ಲಿ ಸಮರ್ಪಕವಾಗಿ ಅಧಿಕಾರಿಗಳು ನಿರ್ವಹಣೆ ಮಾಡಬೇಕು. ಜನಸಾಮಾನ್ಯರ ಅಹವಾಲುಗಳಿಗೆ ಸಹಾನುಭೂತಿಯಿಂದ ಸ್ಪಂದಿಸಬೇಕು ಎಂದು ಸೂಚಿಸಿದರು.
ಕಾಮಗಾರಿ ಸ್ಥಳ ಪರಿಶೀಲಿಸಿ : ಜಿಲ್ಲೆಯಲ್ಲಿ ಜೆಜೆಎಂ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಆಯಾ ತಾಲೂಕಾ ಕಾರ್ಯನಿರ್ವಹಣಾಧಿಕಾರಿಗಳು ಗುತ್ತಿಗೆದಾರರೊಂದಿಗೆ ಹಾಗೂ ಪಿಡಿಓ ಗಳೊಂದಿಗೆ ಖುದ್ದು ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಬರಗಾಲದ ಕಾಮಗಾರಿ ಕೈಗೆತ್ತಿಕೊಂಡು ಶೀಘ್ರವಾಗಿ ನಿರ್ವಹಿಸಬೇಕು. ಗ್ರಾಮೀಣ ಭಾಗದ ಕಾಮಗಾರಿಗಳನ್ನು ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸುವ ಮೂಲಕ ಸರ್ಕಾರದ ಅನುದಾನ ಸದ್ಭಳಕೆಯಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಾಸ್ತವಾಂಶ ಅರಿತು ಕಾರ್ಯನಿರ್ವಹಿಸಿ: ಗ್ರಾಮೀಣ ಭಾಗದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ವಾರಕ್ಕೊಂಡು ಬಾರಿ ಸಭೆ ನಡೆಸಬೇಕು ಹಾಗೂ ಸ್ಥಳ ಪರಿಶೀಲನೆ ಮಾಡಬೇಕು. ವಾಸ್ತವಾಂಸ ಅರಿಯುವ ಮೂಲಕ ಸಮಸ್ಯೆಯ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು.
ಅನುದಾನದ ಕೊರತೆಯಿಲ್ಲ : ಬರ ನಿರ್ವಹಣೆಗಾಗಿ ಅಧಿಕಾರಿಗಳು ಮೊದಲು ಎಸ್.ಡಿ.ಆರ್.ಎಫ್. ಮಾರ್ಗಸೂಚಿಗಳನು ಅರಿತು ಕಾಮಗಾರಿಗಳನು ಕೈಗೆತ್ತಿಕೊಳ್ಳಬೇಕು. ಎಸ್ ಡಿ ಆರ್ ಎಫ್ ಅನುದಾನ ಹಾಗೂ ಮಾರ್ಗಸೂಚಿಯಲ್ಲಿ ಬರದಿದ್ದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಗಳಿಗೆ 850 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು ಈ ಅನುದಾನದಲ್ಲಿ ಅಗತ್ಯಕ್ಕನುಸಾರ ಕಾಮಗಾರಿಗಳನ್ನು ಕೈಗೊಳ್ಳಬೇಕು. ಗದಗ ಜಿಲ್ಲೆಗೆ 25 ಕೋಟಿಗಳನ್ನು ಈ ಹಿಂದೆಯೇ ಒದಗಿಸಲಾಗಿದ್ದು ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಬರ ನಿರ್ವಹಣೆ ಮಾಡುವಂತೆ ತಿಳಿಸಿದರು.
ಆದೇಶ ಪಾಲಿಸಿ: ಬರ ನಿರ್ವಹಣೆ ಕುರಿತಂತೆ ಈಗಾಗಲೇ ಮಾರ್ಗಸೂಚಿಗಳನ್ನು ಸರ್ಕಾರದಿಂದ ಹೊರಡಿಸಲಾಗಿದೆ ಅಲ್ಲದೇ ಮುಖ್ಯಮಂತ್ರಿಗಳು , ಕಂದಾಯ ಸಚಿವರು, ತೋಟಗಾರಿಕೆ ಸಚಿವರು , ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳು ಸೇರಿದಂತೆ ಸರ್ಕಾರದ ಎಲ್ಲ ಸಚಿವರು ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿ ಬರ ನಿರ್ವಹಣೆ ಕುರಿತಂತೆ ಸೂಚನೆಗಳನ್ನು ನೀಡಿದ್ದಾರೆ ಹಾಘೂ ಬರ ನಿರ್ವಹಣೆಗಾಗಿ ಅನುದಾನವನ್ನು ಸಹ ಒದಗಿಸಿದ್ದು ತಾಲೂಕಾ ಹಂತದಲ್ಲಿ ಟಾಸ್ಕ್ ಫೋರ್ಸ ಸಮಿತಿ ಸಭೆಗಳನ್ನು ನಡೆಸಿ ಕಾಮಗಾರಿಗಳನು ಕೈಗೊಳ್ಳುವಂತೆ ಹೇಳಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್.ಪಾಟೀಲ ಅವರು ಮಾತನಾಡಿ ಹಾಸ್ಟೆಲ್ ಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಯಾಗಬೇಕು. ಡಿಬಿಓಟಿ ಕಾಮಗಾರಿಗಳನ್ನು ಪೂರ್ಣಗೊಳೀಸಿದ ನಂತರವೇ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರ ಮಾಡಬೇಕು ಎಂದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಮಾತನಾಡಿ ಕಳೆದ ಎರಡು ತಿಂಗಳಿಂದ ಗ್ರಾಮೀಣ ಭಾಗದ ಕೆಲವೆಡೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು ಸಮಸ್ಯೆ ಪರಿಹಾರಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ಪಾಲಕ ಅಭಿಯಂತರರಿಗೆ ಸೂಚಿಸಲಾಗಿದ್ದರೂ ಸಹ ನೆಪ ಹೇಳುತ್ತಾ ಕಾಮಗಾರಿಯನ್ನು ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕೆಳ ಹಂತಕ್ಕೆ ಹೋಗುತ್ತಿದ್ದು ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ತಿಳಿಸುತ್ತಾ ತಾಲೂಕಾವಾರು ನೀರಿನ ಮಟ್ಟದ ವಿವರ ನೀಡಿದರು. ಜಿಲ್ಲೆಯಲ್ಲಿ 2023ರ ಅಕ್ಟೋಬರ್ ತಿಂಗಳಿನಲ್ಲಿ 6.83 ಮೀಟರ್ ಅಂತರ್ಜಲ ಮಟ್ಟವಿತ್ತು. ಫೆಬ್ರುವರಿ ಅಂತ್ಯದಲ್ಲಿ 13.08 ಮೀಟರ್ ಕೆಳಗಿಳಿದಿದೆ. ತಾಲೂಕುವಾರು ನೋಡುವುದಾದರೆ ಮುಂಡರಗಿ 6.90, ಗದಗ 9.53, ನರಗುಂದ 11.83, ರೋಣ 13.25, ಗಜೇಂದ್ರಗಡ 21.0, ಲಕ್ಷ್ಮೇಶ್ವರ 16.73, ಶಿರಹಟ್ಟಿ 12.8 ಮೀಟರ್‍ನಷ್ಟು ಕೆಳಗಿದೆ ಎಂದರು.
ಸಭೆಯಲ್ಲಿ ತೆರಿಗೆ ಸಂಗ್ರಹ, ಕೂಸಿನ ಮನೆ ಕಾಮಗಾರಿ, ನರೇಗಾ ಕಾಮಗಾರಿ, ಗ್ರಂಥಾಲಯಗಳ ಸೌಲಭ್ಯ , ಹಾಸ್ಟೆ ಲ್ ಗಳಿಗೆ ಕುಡಿಯುವ ನೀರು ಪೂರೈಕೆ ಕುರಿತಂತೆ ಚರ್ಚಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ. ಉಪಕಾರ್ಯದರ್ಶಿ ಸಿ.ಬಿ. ದೇವರಮನಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಆರ್.ಗೌಡರ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ಜೆ.ಸಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗುಣ್ಣವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕರಿಯಲ್ಲಪ್ಪ ಕೆ, ಸೇರಿದಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.
BREAKING : ಹಾರಾಟಕ್ಕೆ ಸಿದ್ಧವಾದ ‘Fly91’ ವಿಮಾನ, ‘DGCA’ನಿಂದ ‘ಏರ್ ಆಪರೇಟರ್ ಪ್ರಮಾಣಪತ್ರ’
ಮಾ.9ರಂದು ಬೆಂಗಳೂರಿನ GKVK ಆವರಣದಲ್ಲಿ ‘ರೈತ ಸೌರ ಶಕ್ತಿ ಮೇಳ’ ಆಯೋಜನೆ: CM ಸಿದ್ದರಾಮಯ್ಯ ಚಾಲನೆ