ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿನ ಮೊದಲ ಚಾಲಕ ರಹಿತ ರೈಲು ಸಂಚಾರದ ಕುರಿತು ಬಿಎಂಆರ್ ಸಿಎಲ್ ನಿಂದ ಮಹತ್ವದ ಅಪ್ ಡೇಟ್ ನೀಡಲಾಗಿದೆ. ಅದೇನು ಅಂತ ಮುಂದೆ ಓದಿ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ BMRCL, ಚೀನಾದ ಸಿ.ಆರ್.ಆರ್.ಸಿ (CRRC) ತಯಾರಿಸಿದ ಮೊದಲ ಮಾದರಿಯ ಆರು ಬೋಗಿ ಮೆಟ್ರೋ ರೈಲು ಎಲೆಕ್ಟ್ರಾನಿಕ್ ಸಿಟಿ ಹತ್ತಿರದಲ್ಲಿರುವ ಹೆಬ್ಬಗೋಡಿ ಮೆಟ್ರೋ ಡಿಪೋ ಗೆ ದಿನಾಂಕ 14 ಫೆಬ್ರವರಿ 2024 ರಂದು ಆಗಮಿಸಿದೆ.
ಹೊಸ ರೋಲಿಂಗ್ ಸ್ಟಾಕ್ ಆಗಿರುವುದರಿಂದ ಬಹು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಗಾಗಿ ಪರೀಕ್ಷಾ ಟ್ರ್ಯಾಕ್ಗೆ ತೆರಳುವ ಮೊದಲು ಬೋಗಿಗಳನ್ನು ಜೋಡಿಸಲಾಗಿದೆ. ನಂತರ, ಅದನ್ನು ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸುಮಾರು 37 ಮಾದರಿಯ ಪರೀಕ್ಷೆಗಳು ನಾಲ್ಕು ತಿಂಗಳವರೆಗೆ ನಡೆಯಲಿದೆ. ತದನಂತರ 45 ದಿನಗಳವರೆಗೆ ಸಿಗ್ನಲಿಂಗ್ ವ್ಯವಸ್ಥೆ, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ ಇತ್ಯಾದಿಗಳೊಂದಿಗೆ ಸಿಸ್ಟಮ್ ಏಕೀಕರಣ ಪರೀಕ್ಷೆಗಳು ನಡೆಯಲಿವೆ.
ಶಾಸನಬದ್ಧ ಸುರಕ್ಷತಾ ಪರೀಕ್ಷೆಗಳು, ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಮೂಲಕ ಆಸಿಲೇಷನ್ ಟ್ರಯಲ್ಸ್ ಮತ್ತು ಕಮಿಷನರ್ ಆಫ್ ಮೆಟ್ರೋ ರೈಲ್ ಸೇಫ್ಟಿ (CMRS) ಅವರಿಂದ ತಪಾಸಣೆಗೆ ಒಳಪಡಿಸಲಾಗುತ್ತದೆ. RDSO ಮತ್ತು CMRS ನ ಶಿಫಾರಸುಗಳನ್ನು ಆಧರಿಸಿ, ವಾಣಿಜ್ಯ ಸೇವೆಗಾಗಿ ರೈಲುಗಳನ್ನು ಪರಿಚಯಿಸುವ ಮೊದಲು ರೈಲ್ವೆ ಮಂಡಳಿಯ ಅನುಮೋದನೆಯನ್ನು ಪಡೆಯಬೇಕಾಗಿರುತ್ತದೆ.
ಈ ರೈಲು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಉದಾಹರಣೆಗೆ ಚಾಲಕ ರಹಿತ ರೈಲು ಕಾರ್ಯಾಚರಣೆ (UTO), ಕಾರ್ಯಾಚರಣೆಯ ನಿಯಂತ್ರಣ ಕೇಂದ್ರದಿಂದ ವರ್ಧಿತ ಮೇಲ್ವಿಚಾರಣೆ ಸಾಮರ್ಥ್ಯ (OCC), ಟ್ರ್ಯಾಕ್ ಮಾನಿಟರಿಂಗ್ ಸಿಸ್ಟಮ್, ಹಾಟ್ ಆಕ್ಸಲ್ ಪತ್ತೆ ವ್ಯವಸ್ಥೆ, ಅಡಚಣೆ ಮತ್ತು ಡಿರೈಲ್ಮೆಂಟ್ ಡಿಟೆಕ್ಷನ್ ವ್ಯವಸ್ಥೆ ಇತ್ಯಾದಿ. ಈ, ಬೋಗಿಗಳು ಮಾರ್ಗಗಳು, ಜಾಹೀರಾತುಗಳು, ಸೂಚನೆಗಳು, ಮಾಹಿತಿ ಇತ್ಯಾದಿಗಳನ್ನು ಪ್ರದರ್ಶಿಸಲು ಬಾಗಿಲುಗಳ ಮೇಲೆ ವಿದ್ಯುತ್ ಸಂಕೇತಗಳನ್ನು ಹೊಂದಿರುತ್ತವೆ.
ಇದಲ್ಲದೇ, CBTC ಗಾಗಿ ಮಾದರಿ ರೈಲು, DTG ಸಿಗ್ನಲಿಂಗ್ನೊಂದಿಗೆ ಮತ್ತೊಂದು ಮೂಲಮಾದರಿಯ ರೈಲು ಚೀನಾದ CRRC ನಿಂದ ಸರಬರಾಜ ಆಗಲಿದೆ. ಉಳಿದ 34 ರೈಲು ಸೆಟ್ಗಳನ್ನು (14 CBTC & 20 DTG) ಭಾರತದಲ್ಲಿ ಪಶ್ಚಿಮ ಬಂಗಾಳದ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ನಲ್ಲಿ ತಯಾರಿಸಲಾಗುತ್ತದೆ.
ಈ ರೈಲುಗಳನ್ನು ಸಂವಹನ-ಆಧಾರಿತ ರೈಲು ನಿಯಂತ್ರಣ (CBTC) ವ್ಯವಸ್ಥೆಯ ಭಾಗವಾಗಿ ಪರಿಚಯಿಸಲಾಗುವುದು, ಇದನ್ನು ಸಾಮಾನ್ಯವಾಗಿ ‘ಚಾಲಕರಹಿತ ತಂತ್ರಜ್ಞಾನ’ ಎಂದು ಕರೆಯಲಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಎರಡೂವರೆ ನಿಮಿಷಗಳಿಗಿಂತ 90 ಸೆಕೆಂಡುಗಳ ಮಟ್ಟಿಗೆ ಹೆಡ್ವೇ ಅನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ರೈಲುಗಳು ಚಾಲಕ ರಹಿತ ಕಾರ್ಯಾಚರಣೆಗೆ ಹೊಂದಿಕೆಯಾಗಿದ್ದರೂ, ನಿಗಮವು ಆರಂಭದಲ್ಲಿ ರೈಲನ್ನು ನಿರ್ವಹಿಸಲು ಲೊಕೊ ಪೈಲಟ್ಗಳನ್ನು ನಿಯೋಜಿಸುತ್ತದೆ.
ಹಳದಿ ಮಾರ್ಗ
18.82 ಕಿಮೀ ಉದ್ದದ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಮಾರ್ಗವು ಆರ್ವಿ ರಸ್ತೆಯನ್ನು ಬೊಮ್ಮಸಂದ್ರದೊಂದಿಗೆ ಸಂಪರ್ಕಿಸುತ್ತದೆ. ಇದು 16 ನಿಲ್ದಾಣಗಳನ್ನು ಹೊಂದಿರುವ ಸಂಪೂರ್ಣ ಎತ್ತರದ ಮೆಟ್ರೋ ಮಾರ್ಗವಾಗಿದೆ (ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇಂಪೋಸಿಸ್ ಫೌಂಡೇಷನ್-ಕೋಣಪ್ಪನ ಅಗ್ರಹಾರ, ಎಲೆಟ್ರಾನಿಕ್ ಸಿಟಿ, ಬಿರಟೆನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕುಡುಲು ಗೇಟ್, ಹೊಂಗಸಂದ್ರ, ಬೊಮ್ಮನ ಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿ.ಟಿ.ಎಂ ಲೇಔಟ್, ಜಯದೇವ ಹಾಸ್ಪಿಟಲ್, ರಾಗಿ ಗುಡ್ಡ ಮತ್ತು ಆರ್.ವಿ ರಸ್ತೆ). ಇದು ಆರ್ವಿ ರಸ್ತೆ ನಿಲ್ದಾಣದಲ್ಲಿ ಬೆಂಗಳೂರು ಮೆಟ್ರೋದ ಹಸಿರು ಮಾರ್ಗ ದೊಂದಿಗೆ ಮತ್ತು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಗುಲಾಬಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಈ ಮಾರ್ಗದಲ್ಲಿ, ರಾಗಿ ಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ 3.13 ಕಿಮೀ ಮೆಟ್ರೋ ಮಾರ್ಗ ಮತ್ತು ರಸ್ತೆ ಮೇಲ್ಸೇತುವೆ ಹೊಂದಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ರಸ್ತೆ ಮೇಲ್ಸೇತುವೆ ನಿರ್ಮಿಸಲಾಗಿದ್ದು, ಇದು 5 ಲೂಪ್ಗಳು ಮತ್ತು ಇಳಿಜಾರುಗಳನ್ನು ಒಳಗೊಂಡಿದೆ. ಕೆ.ಆರ್ ಪುರ ಮತ್ತು ಹೊಸೂರು ರಸ್ತೆಯಲ್ಲಿ (ಎಬಿಸಿ ರಾಂಪ್ಗಳು) ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ.
ಜಯದೇವ ಮೆಟ್ರೋ ನಿಲ್ದಾಣವು ರೀಚ್-5ರ ಹಳದಿ ಮಾರ್ಗ (ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ) ಮತ್ತು ರೀಚ್-6ರ ಗುಲಾಬಿ (ಕಳೇನ ಅಗ್ರಹಾರದಿಂದ ನಾಗವಾರ) ಮಾರ್ಗಗಳಿಗೆ ಬದಲಾವಣೆ ನಿಲ್ದಾಣವಾಗಿದ್ದು, ಈ ನಿಲ್ದಾಣವು ಒಂದು ವಿಶೇಷವಾದ ಸಂಯೋಜಿತ ಹೊಂದಿದೆ, ಇವುಗಳು
- ಬನ್ನೇರುಘಟ್ಟ ರಸ್ತೆ ಕೆಳಸೇತುವೆ
- ನೆಲಮಟ್ಟದಲ್ಲಿ ಮಾರೇನಹಳ್ಳಿ ರಸ್ತೆ
- ರಾಗಿಗುಡ್ಡ – ಸೆಂಟ್ರಲ್ ಸಿಲ್ಕ್ ಬೋರ್ಡ್, ರಸ್ತೆ ಮೇಲ್ಸೇತುವೆ
- ಮೆಟ್ರೋ ಕಾನ್ಕೋರ್ಸ್ ಮಟ್ಟ
- ರೀಚ್-5 ಪ್ಲಾಟ್ಫಾರ್ಮ್ – ಹಳದಿ ಮಾರ್ಗ (ಆರ್ವಿ ರಸ್ತೆ-ಬೊಮ್ಮಸಂದ್ರ)
- ರೀಚ್-6 ಪ್ಲಾಟ್ಫಾರ್ಮ್- ಗುಲಾಬಿ ಮಾರ್ಗ (ಕಾಳೇನ ಅಗ್ರಹಾರ-ನಾಗವಾರ)
ಇನ್ಫೋಸಿಸ್, ಬಯೋಕಾನ್ ನಂತಹ ದೊಡ್ಡ ಐಟಿ ಕಂಪನಿಗಳಿಗೆ ಹಾಗೂ ದಕ್ಷಿಣ ಬೆಂಗಳೂರಿಗರಿಗೆ ನೆಲೆಯಾಗಿರುವ ಪ್ರದೇಶಗಳಿಗೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ಬೆಂಗಳೂರಿನ ಪ್ರಯಾಣಿಕರ ದೈನಂದಿನ ಓಡಾಟದ ಸಮೇವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ. ಇದು ಸುಗಮ ಮತ್ತು ಸಮರ್ಥ ಪ್ರಯಾಣಕ್ಕೆ ಅನುಕೂಲವಾಗಲಿದ್ದು ನಗರದಲ್ಲಿನ ಒಟ್ಟಾರೆ ಮೆಟ್ರೋ ಸಂಪರ್ಕವನ್ನು ಹೆಚ್ಚಿಸಲಿದೆ. ಈ ಮಾರ್ಗದ ಕಾರ್ಯಾರಂಭದೊಂದಿಗೆ, ಇದು ಆರಾಮದಾಯಕ ಅನುಭವ ಮತ್ತು ದಕ್ಷ ಸೇವೆಯೊಂದಿಗೆ ಬೆಂಗಳೂರು ಮೆಟ್ರೋ ಪ್ರಯಾಣಿಕರ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ದೇಶದಲ್ಲೇ ಚಾಲಕ ರಹಿತ ಮೆಟ್ರೋ ರೈಲು ಹೊಂದಿರುವ ಬೆಂಗಳೂರು ಮೆಟ್ರೋ 2ನೇ ಸ್ಥಾನ ಪಡೆಯಲಿದೆ.
ಶಿವಮೊಗ್ಗ: ಸೊರಬ ಪುರಸಭೆ ‘ಕಂದಾಯ ನಿರೀಕ್ಷಕ ವಿನಾಯಕ’ ಲೋಕಾಯುಕ್ತ ಬಲೆಗೆ
BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ನೆಲಮಂಗಲದಲ್ಲಿ ’73 ಭ್ರೂಣ ಹತ್ಯೆ’ ಪ್ರಕರಣ ಬೆಳಕಿಗೆ