ಬೆಂಗಳೂರು: ಶ್ರೀ ವರದರಾಜೇಶ್ವರ ಶಿವಾಲಯ.. ನಿಮ್ಮೆಲ್ಲ ಇಷ್ಟಾರ್ಥಗಳನ್ನ ಈಡೇರಿಸುವ ದೇಗುಲ. ಈ ದೇವಾಲಯ 13ನೇ ಜ್ಯೋತಿರ್ಲಿಂಗ ಆಗುತ್ತೆ ಅಂತ ಸಾಕಷ್ಟು ಸಾಧು-ಸಂತರು ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಶ್ರೀವರದರಾಜೇಶ್ವರ ಶಿವಾಲಯದ ಇತಿಹಾಸ, ಪವಾಡವನ್ನು ಕೇಳಿದರೆ ಖಂಡಿತ ನಿಮಗೆ ಅಚ್ಚರಿಯಾಗುತ್ತೆ. ಇಲ್ಲಿಗೆ ಬಂದ ಭಕ್ತರ ಇಷ್ಟಾರ್ಥಗಳನ್ನು ಆ ಶಿವ ಪರಮಾತ್ಮ ಪೂರೈಸದೇ ಕಳುಹಿಸಲಾರ. ಶ್ರೀವರದರಾಜೇಶ್ವರ ಶಿವಾಲಯದ ಇತಿಹಾಸ, ಪವಾಡ, ಪೂಜೆ ಹಾಗೂ ಸೇವೆಗಳೇ ವಿಭಿನ್ನ.
ಹೌದು, ಇದು ಬಿಡದಿಯ ಸಮೀಪವಿರುವ ಜಡೇನಹಳ್ಳಿ ಗ್ರಾಮದಲ್ಲಿರುವ ಅತ್ಯಂತ ಶಕ್ತಿಶಾಲಿ ಶಿವ ದೇವಾಲಯ. ಶ್ರೀ ನಾರಾಯಣ ರೆಡ್ಡಿ ಗುರುಗಳು ಈ ದೇವಾಲಯದ ಮೂಲ ಸಂಸ್ಥಾಪಕರು. ಖುಷಿಯೊಬ್ಬರು ಕನಸಿನಲ್ಲಿ ಬಂದು ಹೇಳಿದಂತೆ ನರ್ಮದಾ ತೀರದಲ್ಲಿ ಕೆಂಪು ಶಿವಲಿಂಗ ದೊರಕಿತ್ತು. ಅದನ್ನ ವಿಧಿವಿಧಾನಗಳಂತೆ ಪ್ರತಿಷ್ಟಾಪನೆ ಮಾಡಿ ಪೂಜಿಸಿಕೊಂಡು ಬರಲಾಗಿದೆ. ಪ್ರತಿಷ್ಟಾಪನೆಯ ದಿನವೇ ಅಚ್ಚರಿ ಎಂಬಂತೆ ಕಪ್ಪೆಯೊಂದು ಇದ್ದಕ್ಕಿದ್ದಂತೆ ಬಂದು ಶಿವಲಿಂಗವನ್ನ 3 ಬಾರಿ ಪ್ರದಕ್ಷಿಣೆ ಮಾಡಿ ಹೋಗುತ್ತದೆ.
ಇದಾದ 2 ತಿಂಗಳ ಬಳಿಕ ಶಿವ ದೇವಾಲಯದ ಬಳಿ ಎಂದೂ ಕೇಳರಿಯದ ಗುಡುಗು – ಸಿಡಿಲಿನ ಶಬ್ಧ ಕೇಳಿಸುತ್ತದೆ. ಎಲ್ಲರೂ ಸ್ಥಳಕ್ಕೆ ಬಂದು ನೋಡಿದಾಗ ಜನರಿಗೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು. ತೆಂಗಿನ ಮರ ಉರಿದು ಭಸ್ಮವಾಗಿತ್ತು. ಅಂದಿನಿಂದ ಪ್ರತಿನಿತ್ಯ ಪೂಜೆ ಮಾಡುವ ಪದ್ಧತಿ ಆರಂಭವಾಯಿತು. ಕಳೆದ ಶಿವರಾತ್ರಿಯಂದು ವಿಶೇಷ ಪೂಜೆ ಏರ್ಪಡಿಸಲಾಗಿತ್ತು.. ಇದೇ ವೇಳೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ 5 ಸಾವಿರ ಅಘೋರಿಗಳಿಗೆ ಗುರುವಾದ ಶ್ರೀ ಶ್ರೀ ಕೈಲಾಸಪುರಿ ಮಹಾ ಅಘೋರಿ ಗುರುಗಳು ಇದ್ದಕ್ಕಿದ್ದಂತೆ ಭೇಟಿ ನೀಡಿ ಶಿವಲಿಂಗಕ್ಕೆ ಪ್ರದಕ್ಷಿಣೆ ಹಾಕಿ ಈ ದೇಗುಲ 13ನೇ ಜ್ಯೋತಿರ್ಲಿಂಗವಾಗುವುದು ಎಂದು ಹೇಳಿದ್ದರು. ಅಷ್ಟೆ ಅಲ್ಲ ಈ ಘಟನೆ ನಡೆದು 10 ನೇ ದಿನಕ್ಕೆ ಕೇರಳದ ಪೌರ್ಣಾಮಿಕಾವು ದೇವಾಲಯದ ಭಕ್ತರ ಸಮ್ಮುಖದಲ್ಲಿ ಶ್ರೀವರದರಾಜೇಶ್ವರ ದೇವಾಲಯವು 13 ನೇ ಜ್ಯೋತಿರ್ಲಿಂಗ ಎಂದು ಘೋಷಿಸಿದರು.
ಇಲ್ಲಿ ನಿತ್ಯ ವಿಶೇಷ ಅಲಂಕಾರದ ಪೂಜೆ ನೆರವೇರಿಸಲಾಗುತ್ತದೆ. ಪ್ರತಿದಿನ ಕೂಷ್ಮಾಂಡ ಆರತಿ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ವಿಶೇಷ ಅಲಂಕಾರ, ಪೂಜೆ ಹಾಗೂ ಸಾಮೂಹಿಕ ಪ್ರತ್ಯಂಗಿರ ಹೋಮ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಪ್ರದೋಷಪೂಜೆ, ಭಸ್ಮಾಲಂಕಾರ, ಶಾಶ್ವತ ಪೂಜೆ ಇತ್ಯಾದಿ ನಡೆಯುತ್ತಲೇ ಇರುತ್ತದೆ.
ಮಾರ್ಚ್ 8ನೇ ತಾರೀಖು.. ಮಹಾಶಿವರಾತ್ರಿ… ಶಿವನ ಆರಾಧನೆಗೆ ಭಕ್ತರು ಸಜ್ಜಾಗುತ್ತಿದ್ದಾರೆ. ದೇಗುಲದಲ್ಲಿ ಶಿವ..ಶಿವ ಶಂಭೋ.. ಹರ ಹರ ಮಹಾದೇವ ಎಂಬ ಜಪ ಮೊಳಗಲಿದೆ..ಅದ್ರಲ್ಲೂ ಈ ಬಾರಿಯ ಶಿವರಾತ್ರಿ..ಶುಭ ಶುಕ್ರವಾರದಂದು ಬಂದಿದೆ.. ಜೊತೆಗೆ ಪ್ರದೋಷದಲ್ಲಿ ಶಿವರಾತ್ರಿ ಬಂದಿರೋದ್ರಿಂದ ಐಶ್ವರ್ಯ ಪ್ರದೋಷ ಕಾಲವಿದು.. ಭಕ್ತಿಯಿಂದ ಶಿವನ ಆರಾಧನೆ ಮಾಡಿದ್ರೆ, ಶಿವನೊಲಿದು ಬೇಡಿದ್ದನ್ನ ಕೊಡ್ತಾನೆ ಅನ್ನೋ ನಂಬಿಕೆ ಭಕ್ತರದ್ದು.. ಇದೇ ಶಿವರಾತ್ರಿಯ ಶುಭಗಳಿಗೆಯಲ್ಲಿ ಬೆಂಗಳೂರಿನ ಹೊರವಲಯದ ವಂಡರ್ ಲಾ ಹಿಂಭಾಗವಿರುವ ಜಡೇನಹಳ್ಳಿಯ ಶ್ರೀವರದರಾಜೇಶ್ವರ ಸ್ವಾಮಿ ಶಿವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನ ಏರ್ಪಡಿಸಲಾಗಿದೆ. ಅದ್ರಲ್ಲೂ ಪ್ರದೋಷ ಶಿವರಾತ್ರಿಯಂದು ಶಿವನಿಗೆ ರುದ್ರಾಭಿಷೇಕ ಮಾಡಿದ್ರೆ, ಇಷ್ಟಾರ್ಥಗಳು ಈಡೇರುತ್ತವೆ ಅಂತಾರೆ ಶ್ರಿವರದರಾಜೇಶ್ವರ ಶಿವಾಲಯದ ಸಂಸ್ಥಾಪಕರಾದ ಗುರು ಶ್ರೀ ನಾರಾಯಣರವರು.
ಈ ಅದ್ಭುತ ಶಿವ ದೇವಾಲಯದ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲದೇ ಇರಬಹುದು. ಒಂದು ವೇಳೆ ನಿಮಗೆ ತಿಳಿದಲ್ಲವಾದರೆ, ಇಂದೇ ಈ ದೇವಾಲಯಕ್ಕೆ ಭೇಟಿ ನೀಡಿ…ಅದ್ರಲ್ಲೂ ಈ ಬಾರಿಯ ಶಿವರಾತ್ರಿ ಆಚರಣೆಗೆ ವಿಶೇಷ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಶ್ರೀ ಹನುಮಂಥನಾಥ ಶ್ರೀಗಳು ಅಜಯ್ ವಾರಿಯರ್ ಹಾಡಿರುವ ಶ್ರೀ ವರದರಾಜೇಶ್ವರ ಭಕ್ತಿಗೀತೆ ಆಡಿಯೋ ಬಿಡುಗಡೆ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಭರತನಾಟ್ಯ ಕಲಾವಿದರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ 8ಕ್ಕೆ ದಿವ್ಯಾ ಅಲೂರು ಮತ್ತು ಸಂಗಡಿಗರಿಂದ ಸಂಗೀತ ರಸಸಂಜೆ ಕಾರ್ಯಕ್ರಮವಿದೆ. ಇನ್ನು ಮಿಮಿಕ್ರಿ ಗೋಪಿ ನಕ್ಕು ನಗಿಸಲಿದ್ದಾರೆ. ಶಿವರಾತ್ರಿಯ ಮಹಾಶಿವರಾತ್ರೋತ್ಸವ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ ಶಿವನ ಕೃಪೆಗೆ ಪಾತ್ರರಾಗಲು ಕೋರಿದೆ.
BREAKING: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೇಸ್: ಇಬ್ಬರಿಗೆ ನ್ಯಾಯಾಂಗ ಬಂಧನ, ಓರ್ವ ಪೊಲೀಸ್ ವಶಕ್ಕೆ
ಇಡೀ ರಾಜ್ಯ ಬೆಚ್ಚಿ ಬೀಳಿಸುವ ಸುದ್ದಿ: ಬೆಂಗಳೂರಿನಲ್ಲಿ ಬರೋಬ್ಬರಿ 73 ಭ್ರೂಣ ಹತ್ಯೆ!