ಬೆಂಗಳೂರು: ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿ ಇಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸಿಎಂ ಸಿದ್ದರಾಮಯ್ಯನವರು ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಸಾಂತ್ವನದ ಜೊತೆಗೆ ಸಾವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ತೋರಿದ ಕುಟುಂಬಗಳ ಕಾರ್ಯವನ್ನ ಶ್ಲಾಘಿಸಿದರು.
ಅಪಘಾತಕ್ಕೀಡಾದ ಶರವಣ ಅವರ ಪತ್ನಿ, ಪ್ರಶಂಸಾ ಪತ್ರ ಸ್ವೀಕರಿಸುವಾಗ ಅಗಲಿದ ತಮ್ಮ ಪತಿಯನ್ನು ನೆನೆದು ಕಣ್ಣೀರಿಟ್ಟರು. ಕೊಲೆಗೀಡಾದ ಚಿಕ್ಕಮಗಳೂರು ಕೆ.ಜಿ. ನವೀನ್ ಕುಟುಂಬದವರಿಗೆ ಅವರ ಸಾವಿಗೆ ನ್ಯಾಯ ಒದಗಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ
ನೀವು ಕೈಗೊಂಡ ನಿರ್ಧಾರ ಸುಲಭವಲ್ಲ. ಆದರೆ ಇತರರ ಜೀವ ಉಳಿಸುವ ಕೆಲಸ ನೀವು ಮಾಡಿದ್ದೀರಿ. ನಿಮಗೆ ಯಾವುದೇ ಸಂಕಷ್ಟ ಎದುರಾದರೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸ್ಥೈರ್ಯ ತುಂಬಿದರು.
ತಮ್ಮ ಹಿಂದಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದನ್ನು ಸ್ಮರಿಸಿದ ಸಿಎಂ, ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅಂಗಾಂಗ ದಾನ ಕೋರಿ, ನೋಂದಾಯಿಸಿಕೊಂಡವರ ಸಂಖ್ಯೆ 8000 ಕ್ಕೂ ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ 178 ಅಂಗಾಂಗ ದಾನ ನಡೆದಿದೆ. ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಇದು ಇನ್ನಷ್ಟು ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು, ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳು ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡಲಾಗುವುದು. ಒಬ್ಬ ವ್ಯಕ್ತಿ ಅಂಗಾಂಗ ದಾನದ ಮೂಲಕ ಎಂಟು ಜನರಿಗೆ ಜೀವದಾನ ಮಾಡಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಹಾಗೂ ಆಯುಕ್ತ ಡಿ.ರಂದೀಪ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಯೋಗ ವಾರ್ತೆ: ‘KPSC’ಯಿಂದ ‘364 ಭೂಮಾಪಕರ’ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
‘ರಾಜ್ಯ ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಪ್ರಥಮ ಅಧಿವೇಶನ ‘ಇಲಾಖಾ ಪರೀಕ್ಷೆ’ಗೆ ಅರ್ಜಿ ಆಹ್ವಾನ