ಬೆಂಗಳೂರು: ಮೊಳಕಾಲ್ಮೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದವರು ಡಾ.ಬಿ ಯೋಗೇಶ್ ಬಾಬು. ಅವರನ್ನು ಮನವೊಲಿಸಿದ್ದಂತ ಕಾಂಗ್ರೆಸ್ ಪಕ್ಷದ ನಾಯಕರು ಎನ್.ವೈ ಗೋಪಾಲಕೃಷ್ಣ ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ನೀಡಿದ್ದರು. ಇಂತಹ ಡಾ.ಬಿ ಯೋಗೇಶ್ ಬಾಬು ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿದ್ದಾರೆ.
ಈ ಕುರಿತಂತೆ ಸರ್ಕಾರದ ಕಾರ್ಯದರ್ಶಿಯಾಗಿರುವಂತ ರಂದೀಪ್.ಡಿ ಅವರು ಟಿಪ್ಪಣಿ ಹೊರಡಿಸಿದ್ದು, ವಿವಿಧ ನಿಗಮ/ಮಂಡಳಿ/ಪ್ರಾಧಿಕಾರಗಳ ಅಧ್ಯಕ್ಷರು/ಉಪಾಧ್ಯಕ್ಷರ ನೇಮಕಾತಿ ಆದೇಶಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಹೊರಡಿಸಬೇಕಾಗಿರುತ್ತದೆ. ಅದರಂತೆ, ಸದರಿಯವರು ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳ ಅವಧಿಯವರೆಗೆ ಕಾರ್ಯನಿರ್ವಹಿಸುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಈ ಮೂಲಕ ಸೂಚಿಸಿದ್ದಾರೆ.
ಈಗ ಬಿಡುಗಡೆಯಾಗಿರುವಂತ 44 ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ಆದೇಶದ ಪಟ್ಟಿಯಲ್ಲಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಡಾ.ಬಿ ಯೋಗೇಶ್ ಬಾಬು ಅವರನ್ನು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಿಗೆ ಸಿಎಂ ಸಿದ್ಧರಾಮಯ್ಯ ನಿಗಮ-ಮಂಡಳಿಯ ನೇಮಕಾತಿಯಲ್ಲಿ ಅವಕಾಶ ನೀಡಿದ್ದಾರೆ.