ಬೆಂಗಳೂರು: ರಾಜ್ಯಾಧ್ಯಂತ ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ಅಂತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೇ ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿ ನೀಡದಂತೆ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ, 2017 ರ ಸೆಕ್ಷನ್ 6 ರನ್ವಯ, ದಿನಾಂಕ. 04-04-2019 ರಿಂದ ಜಾರಿಗೆ ಬರುವಂತೆ, ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡತಕ್ಕದ್ದಲ್ಲ ಎಂದು ತಿಳಿಸಿದ್ದಾರೆ.
ಅದಾಗ್ಯೂ, ಕೆಲವು ಅನಧಿಕೃತ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ಅಂತರದೊಳಗೆ ಕಾರ್ಯ ನಿರ್ವಹಿಸುತ್ತಿರುವ ಸಂಬಂಧ ಈ ಆಯುಕ್ತಾಲಯಕ್ಕೆ ದೂರು ಸ್ವೀಕೃತಗೊಂಡ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡುವ ಮತ್ತು ಸರ್ಕಾರಿ ಆಸ್ಪತ್ರೆಯಿಂದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸ್ಥಳ ಪರಿಶೀಲನೆ ಮಾಡುವಂತೆ ಮತ್ತು ಅವುಗಳು ಕೆ.ಪಿ.ಎಂ.ಇ ಕಾಯ್ದೆ ಅಥವಾ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಅಂತಹ ಪುಯೋಗಾಲಯಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ & ಕುಂದು ಕೊರತೆ ನಿವಾರಣಾ ಪ್ರಾಧಿಕಾರ) & ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಈಗಾಗಲೇ ದಿನಾಂಕ.12.10.2023ರ ಸುತ್ತೋಲೆ ಸಂಖ್ಯೆ.ಜೆಡಿ(ಎಂ)/ಕೆ.ಪಿ.ಎಂ.ಇ/66/2020-21(e-1193994) ಯಲ್ಲಿ ಆದೇಶಿಸಲಾಗಿತ್ತು. ಹಾಗಿದ್ದರೂ ಸದರಿ ಆದೇಶದಂತೆ ಯಾವುದೇ ಜಿಲ್ಲೆಗಳು ಕಟ್ಟು ನಿಟ್ಟಿನ ಕ್ರಮವಹಿಸದೇ ಇರುವುದನ್ನು ಗಮನಿಸಲಾಗಿ, ಈ ಕೆಳಗಿನಂತೆ ಆದೇಶಿಸಿದೆ.
ದಿನಾಂಕ. 04.04.2019 ದ ನಂತರದಿಂದ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, “ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ/ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪ್ರವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರುಗಳ ದೂರದ ಒಳಗೆ ಕಾರ್ಯನಿರ್ವಹಿಸುತ್ತಿದ್ದಲ್ಲಿ”, ಅಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ.ಪಿ.ಎಂ.ಇ ಯ ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಪ್ರಾಧಿಕೃತ ಅಧಿಕಾರಿಗಳು, ಕೆ.ಪಿ.ಎಂ.ಇ ಇವರಿಗೆ ಆದೇಶಿಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ & ಕುಂದು ಕೊರತೆ ನಿವಾರಣಾ ಪ್ರಾಧಿಕಾರ) & ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮತ್ತೊಮ್ಮೆ ನಿರ್ದೇಶಿಸಿದೆ. ಹಾಗೂ ಮೊಹರು ಬಂದ್ ಮಾಡಲಾದ ಅಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸಂಪೂರ್ಣ ಕ್ರೂಢೀಕೃತ ವಿವರವನ್ನು ದಿನಾಂಕ:30.03.2024 ರೊಳಗೆ dd2medical@gmail.com ಗೆ ತಪ್ಪದೆ ರವಾನಿಸಲು ಎಲ್ಲಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ್ದಾರೆ.