ಬೆಂಗಳೂರು: ವನ್ಯಜೀವಿಗಳ ಹಾವಳಿಗೆ ಸರ್ಕಾರವು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ತಿಳಿಸಿದ್ದಾರೆ.
ವನ್ಯಜೀವಿಗಳು ಮಾನವನ ಜೀವ, ಆಸ್ತಿ ಪಾಸ್ತಿ ಮತ್ತು ಜಾನುವಾರಕ್ಕೆ ಅಪಾಯದ ಕಾರಣವಾದಾಗ ಮಾನವ-ವನ್ಯಜೀವಿ ಸಂಘರ್ಷ ಒದಗಿಸುತ್ತದೆ. ಸಂಘರ್ಷಕ್ಕೆ ಕಾರಣವೆಂದರೆ, ಆವಾಸಸ್ಥಾನ ನಾಶ. ಹೆಚ್ಚುತ್ತಿರುವ ಅಭಿವೃದ್ಧಿಯ ಚಟುವಟಿಕೆಗಳು ಅರಣ್ಯನಾಶಕ್ಕೆ ಕಾರಣವಾಗಿದ್ದು ವನ್ಯಜೀವಿ ಅವಾಸಸ್ಥಾನದ ನಷ್ಟಕ್ಕೆ ಕಾರಣವಾಗುತ್ತದೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಹೆಚ್ಚಿದ ಜಾನುವಾರುಗಳ ಸಂಖ್ಯೆಯು ಅತಿಯಾದ ಮೇಯುವಿಕೆಗೆ ಕಾರಣವಾಗಿದೆ. ಅರಣ್ಯ ಪ್ರದೇಶಗಳು ಅಕ್ರಮಣಕಾರಿ ಪ್ರಭೇದಗಳ/ಕಳೆಗಳ ಪ್ರಸರಣದೊಂದಿಗೆ ಹೆಣಗಾಡುತ್ತಿವೆ. ಇವು ಕಾಡು ಪ್ರಾಣಿಗಳಿಗೆ ರುಚಿಕರವಲ್ಲ. ಅಲ್ಲದೆ ಸಸ್ಯಹಾರಿ ಪ್ರಾಣಿಗಳಿಗೆ ರುಚಿಕರವಾದ ಸ್ಥಳೀಯ ಮರ ಮತ್ತು ಹುಲ್ಲು ಪ್ರಭೇದಗಳಿಗೆ ಹಾನಿಮಾಡುತ್ತವೆ.
ಅರಣ್ಯದಂಚಿನ ಪ್ರದೇಶಗಳಲ್ಲಿ ಮಾನವ ವಸಾಹತುಗಳು ಮತ್ತು ಕೃಷಿಯ ವಿಸ್ತರಣೆಯಿಂದಾಗಿ ವನ್ಯಜೀವಿಗಳೊಂದಿಗೆ ಹೆಚ್ಚಿನ ಮುಖಾಮುಖಿಗಳಿವೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಭೂ ಬಳಕೆಯ ರೀತಿ ಬದಲಾಗಿದೆ. ಹೊಸ ಬೆಳೆಗಳ ಕೃಷಿಯು ವನ್ಯಜೀವಿಗಳನ್ನು ಕೃಷಿ ಪ್ರದೇಶಗಳಿಗೆ ಆಕರ್ಷಿಸುತ್ತಿದೆ. ವನ್ಯಜೀವಿ ಕಾರಿಡಾರ್ಗಳನ್ನು ಕೃಷಿ ಮತ್ತು ವಾಸಕ್ಕಾಗಿ ಬಳಸಲಾಗಿದೆ. ಇದು ಪ್ರಾಣಿಗಳ ವಲಸೆ ಮಾರ್ಗದ ನಷ್ಟಕ್ಕೆ ಕಾರಣವಾಗಿದೆ. ಕೆಲವು ವರ್ಷಗಳಲ್ಲಿ ಹವಾಮಾನ ಕಾರಣಗಳಿಂದಾಗಿ ಕಾಡುಗಳಲ್ಲಿ ಆಹಾರ ಮತ್ತು ನೀರಿನ ಕೊರತೆ ಇರುತ್ತದೆ. ಈ ಸಮಯದಲ್ಲಿ ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಕಾಡಿನಿಂದ ಹೊರಗೆ ಬರುತ್ತವೆ.
ವÀನ್ಯಪ್ರಾಣಿಗಳ ಹಾವಳಿಯಿಂದ ನಿಯಂತ್ರಿಸುವ ಸಲುವಾಗಿ, ವನ್ಯಪ್ರಾಣಿಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಆರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ/ನಿರ್ವಹಣೆ, ಆನೆ ತಡೆÀ ಕಂದಕ ನಿರ್ಮಾಣ/ನಿರ್ವಹಣೆ ಮಾಡಲಾಗುತ್ತಿದೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಟೆಂಟೆಕಲ್ ಸೋಲಾರ್ ಫೆನ್ಸಿಂಗ್, ಸ್ಟೀಲ್ ರೋಪ್ ಬ್ಯಾರಿಕೇಡ್, ಡಬಲ್ ಸೋಲಾರ್ ಫೆನ್ಸಿಂಗ್, ಆನೆತಡೆ ಕಂದಕ ಹಾಗೂ ಸೋಲಾರ್ ಫೆನ್ನಿಂಗ್ ಜೊತೆಯಾಗಿ ನಿರ್ಮಿಸಲು ಕ್ರಮ ವಹಿಸಲಾಗುತ್ತಿದೆ.
ರಾಜ್ಯದಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ಉಪಯೋಗಿಸಿದ ರೈಲ್ವೆ ಹಳಿಗಳನ್ನು ಉಪಯೋಗಿಸಿಕೊಂಡು ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು ಒಟ್ಟು 312.919 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಕೈಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ (2023-24 ನೇ ಸಾಲಿನಲ್ಲಿ) 120.788 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಕೈಗೊಳ್ಳಲು ಗುರಿ ನಿಗಧಿಪಡಿಸಲಾಗಿದೆ.
ಸರ್ಕಾರವು 2022 ನೇ ನವೆಂಬರ್ 21 ರ ಆದೇಶದಲ್ಲಿ ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಾಗೂ 2023 ನೇ ಫೆಬ್ರವರಿ 1 ರ ಆದೇಶದಲ್ಲಿ ಚಾಮರಾಜನಗರ ಜಿಲ್ಲೆ ಮತ್ತು 2023 ನೇ ಜೂನ್ 30 ರ ಆದೇಶದಲ್ಲಿ ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಭಾಗಗಳಲ್ಲಿ ಕಾಡಾನೆ ಹಾವಳಿಯನ್ನಯ ತಡೆಗಟ್ಟಲು ಪ್ರತಿ ಜಿಲ್ಲೆ ಒಂದರಂತೆ ಅಧಿಕಾರಿ / ಸಿಬ್ಬಂದಿಗಳನ್ನು ಒಳಗೊಂಡ ಜಿಲ್ಲಾ ಆನೆ ಕಾರ್ಯಪಡೆಗಳನ್ನು ರಚಿಸಲಾಗಿರುತ್ತದೆ.
2023ನೇ ಜನವರಿ 31 ರ ಆದೇಶದಲ್ಲಿ ಮೈಸೂರು ವೃತ್ತದ ಮೈಸೂರು, ನಂಜನಗೂಡು, ಹೆಚ್ ಡಿ ಕೋಟೆ, ಸರಗೂರು, ಟಿ.ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚಿರತೆ ಹಾವಳಿ ನಿಭಾಯಿಸುವ ನಿಟ್ಟಿನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ, ಮೈಸೂರು ಇವರ ನೇತೃತ್ವದಲ್ಲಿ ಚಿರತೆ ಕಾರ್ಯಪಡೆ ರಚಿಸಲಾಗಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷನಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ರವರ 2023ನೇ ನವೆಂಬರ್ 24 ರ ಜ್ಞಾಪನಾ ಪತ್ರದಲ್ಲಿ ಸೂಚಿಸಿದಂತೆ ಬೆಂಗಳೂರು ಜಿಲ್ಲೆಯ ಕಗ್ಗಲೀಪುರ, ಆನೇಕಲ್, ಯಲಹಂಕ, ಹೊಸಕೋಟೆ, ಕೆ.ಆರ್.ಪುರಂ ವಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾವಳಿ ನಿಭಾಯಿಸುವ ನಿಟ್ಟಿನಲ್ಲಿ ಚಿರತೆ ಕಾರ್ಯಪಡೆಯನ್ನು ರಚಿಸಲಾಗಿದೆ.
ಆನೆ ಕಾರ್ಯಪಡೆ ಮತ್ತು ಚಿರತೆ ಕಾರ್ಯಪಡೆಗಳಿಗೆ ನಿಯಂತ್ರಣ ಕೊಠಡಿ ಸ್ಥಾಪಿಸಿದ್ದು, ನಿಯಂತ್ರಣ ಕೊಠಡಿಗೆ ಬರುವ ಕರೆಗಳಿಗೆ ಸ್ಪಂದಿಸಿ ಕೂಡಲೇ ಕ್ರಮವಹಿಸಲಾಗುತ್ತಿದೆ. ಕಾಡಾನೆ ಗುಂಪಿನಲ್ಲಿ ವಯಸ್ಕ ಹಣ್ಣಾನೆಯನ್ನು ಗುರುತಿಸಿ ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಆನೆಗಳ ಚಲನ-ವಲನಗಳ ಬಗ್ಗೆ, ಎಸ್.ಎಂ.ಎಸ್. ಹಾಗೂ ವಾಟ್ಸಾಪ್ ಮೂಲಕ ಜನರಿಗೆ ಮಾಹಿತಿಯನ್ನು ನೀಡಿ ಮಾನವ ಪ್ರಾಣಹಾನಿ ಹಾಗೂ ಮಾನವ ಗಾಯ ತಪ್ಪಿಸಲು ಕ್ರಮ ವಹಿಸಲಾಗುತ್ತಿದೆ.
ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಗುರುತಿಸಿ, ಸೆರೆಹಿಡಿದು ಆಗಿಂದಾಗ್ಗೆ ಆನೆ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಚಿರತೆ/ಹುಲಿ ಹಾವಳಿ ಹೆಚ್ಚಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಬೋನುಗಳನ್ನು ಇರಿಸಿ ಸೆರೆ ಹಿಡಿದು. ಸೂಕ್ತ ಆವಾಸಸ್ಥಾನಕ್ಕೆ ಸ್ಥಳಾಂತರಿಸಲು ಕ್ರಮವಹಿಸಲಾಗುತ್ತಿದೆ.
ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕರೆಗಳ ನಿರ್ಮಾಣ ಹಾಗೂ ಪುನಶ್ಚೇತನಗೊಳಿಸಿ ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿ ಗೊಳಿಸಲಾಗುತ್ತಿದೆ. ಇದರಿಂದ ಕಾಡಾನೆ ಹಾಗೂ ಇತರೆ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬಾರದಂತೆ ತಡೆಯಲಾಗುತ್ತಿದೆ.
ಅರಣ್ಯ ಪ್ರದೇಶಗಳಲ್ಲಿ ಹುಲ್ಲುಗಾವಲು ಸಂರಕ್ಷಣೆ ಹಾಗೂ ಅಭಿವೃದ್ಧಿಗೊಳಿಸಲು ಹೆಚ್ಚಿನ ಅರಣ್ಯ ಪ್ರದೇಶಗಳಲ್ಲಿ ದಟ್ಟವಾಗಿ ಬೆಳೆದ ಲಂಟಾನ ಮತ್ತು ಯುಪಟೋರಿಯಂ ಕಳೆಗಳಿಂದಾಗಿ ಹುಲ್ಲಿನ ಬೆಳವಣಿಗೆಗೆ ತೀವ್ರ ಅಡಚಣೆಯಾಗಿ ಅರಣ್ಯದಲ್ಲಿ ಹುಲ್ಲಿನ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಹುಲ್ಲು ಬೆಳೆಯುವ ಪ್ರದೇಶಗಳಲ್ಲಿ ಬೆಳೆದಿರುವ ಲಂಟಾನ ಮತ್ತು ಯುಪಟೋರಿಯಂ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಿ ಅರಣ್ಯಕ್ಕೆ ಪೂರಕವಾದ ಹುಲ್ಲು ಬೆಳೆಯಲು ಅನುವು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕಾಡಾನೆ ಹಾವಳಿ ತುರ್ತು ನಿರ್ವಹಣೆಗಾಗಿ ಕ್ಷಿಪ್ರ ಕಾರ್ಯಪಡೆ ತಂಡಗಳನ್ನು ರಚಿಸಿ ನಿರ್ವಹಿಸಲಾಗುತ್ತಿದೆ. ಕಾಡಾನೆ ಹಿಮ್ಮೆಟ್ಟಿಸುವ ತಂಡಗಳನ್ನು ರಚಿಸಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ನಿಸ್ತಂತು ಜಾಲದ ಮೂಲಕ ಮಾಹಿತಿ ಸಂವಹನ ಮಾಡಲಾಗುತ್ತಿದೆ. ಕಾಡಾನೆಗಳ ಮಾಹಿತಿಯನ್ನು ಸಂಗ್ರಹಿಸಲು 24 ಗಂಟೆ ಕಾರ್ಯನಿರ್ವಹಿಸುವ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ.
ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಜನ ಸಂಪರ್ಕ ಸಭೆಯನ್ನು ಕರೆದು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಸೋಲಾರ್ ಬೇಲಿ ನಿರ್ಮಾಣ ಮಾಡಲು ಉತ್ತೇಜನ ನೀಡಲಾಗುತ್ತಿದೆ ಹಾಗೂ ಅರಣ್ಯದ ಅಂಚಿನಲ್ಲಿ ಬರುವ ಖಾಸಗಿ ಜಮೀನುಗಳ ಸುತ್ತಾ ಸರಕಾರದ ವತಿಯಿಂದ ದೊರಕುವ ಶೇ. 50 ಸಬ್ಸಿಡಿಯನ್ನು ಬಳಸಿಕೊಂಡು ಸೌರಶಕ್ತಿ ಬೇಲಿಯನ್ನು ನಿರ್ಮಿಸಲಾಗುತ್ತಿದೆ. ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣಹಾನಿ, ಶಾಶ್ವತ ಅಂಗವಿಕಲತೆ, ಭಾಗಶಃ ಅಂಗವಿಕಲತೆ, ಗಾಯಗೊಂಡವರಿಗೆ ಆಸ್ತಿಪಾಸ್ತಿ ನಷ್ಟ ಪ್ರಕರಣಗಳಲ್ಲಿ ನೀಡುತ್ತಿರುವ ಪರಿಹಾರ ಧನ ಮತ್ತು ಮಾಸಾಶನ ಧನವನ್ನು ದುಪ್ಪಟ್ಟು ಮಾಡಿ ಪರಿಷ್ಕರಿಸಿ ಆದೇಶಿಸಲಾಗಿದೆ.
ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆನಾಶ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಬೆಳೆಗಳಿಗೆ ನಿಗಧಿಪಡಿಸಿರುವ ಪರಿಹಾರ ಮೊತ್ತವನ್ನು ಪ್ರಸ್ತುತ ದುಪ್ಪಟ್ಟು ಮಾಡಿ ಆದೇಶಿಸಲಾಗಿದೆ. ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಸಾಕು ಪ್ರಾಣಿಗಳ ಪ್ರಾಣ ಹಾನಿ ಪ್ರಕರಣಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಚಾಲ್ತಿಯಲ್ಲಿರುವ ಪರಿಷ್ಕøತ ದರಗಳಂತೆ ಪಾವತಿಸಲು ಆದೇಶಿಸಲಾಗಿದೆ.