ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಪಾತ್ರೆಗಳು ಶುಚಿತ್ವ ತುಂಬಾ ಇಂಪಾರ್ಟೆಂಟ್. ಪಾತ್ರೆಗಳು ಸ್ವಚ್ಛವಾಗಿಲ್ಲದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರೋದು ಪಕ್ಕಾ. ಸಹಜವಾಗಿ ನಾವು ಮಾಡುವ ಮಸಾಲಾಭರಿತ ಅಡುಗೆ ಪದಾರ್ಥಗಳು ಪಾತ್ರೆಗಳಿಗೆ ಹೆಚ್ಚು ಜಿಡ್ಡಿನಾಂಶ ಅಂಟಿಕೊಂಡುಬಿಡುತ್ತದೆ. ಈ ಕಠಿಣವಾದ ಕಲೆ ಹಾಗು ಜಿಡ್ಡಿನಾಂಶ ತೆಗೆಯಲು ಕಷ್ಟ ಪಡಲೇಬೇಕು.ಇನ್ನು ಪಾತ್ರೆ ತೊಳೆಯಲು ಮಾರುಕಟ್ಟೆಯಲ್ಲಿ ಅನೇಕ ಬಗೆಯ ಸೋಪ್, ಲಿಕ್ವಿಡ್‌ಗಳಿವೆ. ಆವುಗಳನ್ನು ಬಳಸುವ ಜೊತೆಗೆ ನಾವು ಹೇಳುವ ಟಿಪ್ಸ್ ಫಾಲೋ ಮಾಡಿ ನೋಡಿ. ಪಾತ್ರೆ ತೊಳೆಯಲೂ ಸುಲಭವಾಗುತ್ತದೆ. ಸಮಯ ಉಳಿತಾಯ ಹಾಗು ಪಾತ್ರೆಗಳು ಹೊಳೆಯುತ್ತವೆ.
ತೊಳೆಯುವ ಮುನ್ನ ಪಾತ್ರೆಗಳಲ್ಲಿ ನೀರು ಹಾಕಿ ಅದ್ದಿಡಿ. ಪಾತ್ರೆ ತೊಳೆಯುವ ಮುನ್ನ ಐದು ಹತ್ತು ನಿಮಿಷ ನೀರು ಹಾಕಿ ನೆನಸಿಡಿ. ಹೀಗೆ ಮಾಡಿದರೆ ಪಾತ್ರೆ ತಿಕ್ಕುವಾಗ ಬೇಗ ಕರೆ ಬಿಟ್ಟುಕೊಳ್ಳುತ್ತದೆ. ತುಪ್ಪ ಅಥವಾ ಎಣ್ಣೆ ಜಿಡ್ಡಿರುವ ಪಾತ್ರೆಗಳನ್ನು ಬಿಸಿ ನೀರು ಹಾಕಿ ಅದ್ದಿಡಿ.
ಜಿಡ್ಡಿನ ಪಾತ್ರೆಗಳಲ್ಲದೇ ಇನ್ನುಳಿದ ಪಾತ್ರೆಗಳನ್ನು ಚೆನ್ನಾಗಿ ಉಜ್ಜಿ ಸ್ಕ್ರಬ್‌ನಿಂದ ಪ್ರತೀ ಪಾತ್ರೆಯನ್ನೂ ಸರಿಯಾಗಿ ಉಜ್ಜಿ. ಸ್ಕ್ರಬ್ ಮಾಡಿದ ಬಳಿಕ ನೀರಿನಿಂದ ಸೋಪಿನ ಕಲೆ ಹೋಗುವವರೆಗೂ ಸರಿಯಾಗಿ ತೊಳೆಯಿರಿ. ಸೋಪಿನ ಕಲೆ ಪಾತ್ರೆಯಲ್ಲಿ ಉಳಿದರೆ ಆ ಪತ್ರೆಯಲ್ಲಿ ಊಟ ಮಾಡಿದರೆ ಹೊಟ್ಟೆನೋವು ಬರುವ ಸಂಭವ ಇರುತ್ತದೆ.
ಪಾತ್ರೆ ತೊಳೆಯಲು ನೀವು ಬಳಸುವ ಸ್ಕ್ರಬ್, ಡಿಶ್ ವಾಶ್ ಪೌಡರ್, ಸೋಪ್ ಹಾಗು ಲಿಕ್ವಿಡ್ ಉತ್ತಮ ಗುಣಮಟ್ಟದ್ದಾಗಿರಲಿ. ಕಳಪೆ ಮಟ್ಟದ ಸೋಪ್ ಸ್ಕ್ರಬ್‌ಗಳು ಪಾತ್ರೆಗೆ ಹೊಳಪನ್ನು ಕೊಡುವುದಿಲ್ಲ. ಹಬ್ಬದಡುಗೆ ಅಥವಾ ಇನ್ನಿತರ ವಿಶೇಷವಾದ ಅಡುಗೆ ಮಾಡಿದಾಗ ಪಾತ್ರೆಗಳು ಹೆಚ್ಚಾಗುತ್ತವೆ. ಆಗ ಸಿಂಕ್‌ನಲ್ಲಿ ಎಲ್ಲಾ ಪಾತ್ರೆಗಳನ್ನು ಒಟ್ಟಿಗೆ ಹಾಕಿ ಸಿಂಕ್ ಹೋಲ್ ಅನ್ನು ಮುಚ್ಚಿ ಸಿಂಕ್ ತುಂಬಾ ನೀರು ತುಂಬಿಸಿ. ನೀರು ತುಂಬಿದ ಸಿಂಕ್‌ಗೆ ಲಿಕ್ವಿಡ್ ಹಾಕಿದರೆ ಪಾತ್ರೆ ತೊಳೆಯುವಾಗ ಇನ್ನೂ ಸುಲಭವಾಗುತ್ತದೆ.
ಪಾತ್ರೆಗಳು ಇನ್ನೂ ಹೆಚ್ಚು ಜಿಡ್ಡು ಇದ್ದರೆ ಸಿಂಕ್‌ಗೆ ಬಿಸಿ ನೀರು ತುಂಬಿಸಿ ಪಾತ್ರೆಗಳನ್ನು ನೆನಯಲು ಇಡಿ. ಇನ್ನು ಮುಖ್ಯವಾದ ವಿಷಯವೆಂದರೆ ಪಾತ್ರೆಯಲ್ಲಿ ಅಳಿದುಳಿದ ಆಹಾರವನ್ನು ಸರಿಯಾಗಿ ತೆಗೆದು ಹಾಕಿ. ಆಹಾರವನ್ನು ಕಸದಬುಟ್ಟಿಗೆ ಹಾಕಿ. ಆಹಾರ ಉಳಿದ ಪಾತ್ರೆಯನ್ನು ನೇರವಾಗಿ ಸಿಂಕ್‌ಗೆ ಹಾಕಿದರೆ ಸಿಂಕ್ ತುಂಬೆಲ್ಲಾ ನೀರು ನಿಂತುಬಿಡುತ್ತದೆ. ಇದರಿಂದ ಪಾತ್ರೆಗಳೆಲ್ಲಾ ಜಿಡ್ಡು ಜಿಡ್ಡಾಗಿಬಿಡುತ್ತವೆ.
ಸಾಧ್ಯವಾದರೆ ಪಾತ್ರೆಗಳೆಲ್ಲ ತೊಳಿದ ಮೇಲೆ ಅವುಗಳನ್ನು ಶುಭ್ರವಾದ ಬಟ್ಟೆಯಿಂದ ಒರೆಸಿರಿ. ಆಗ ಪಾತ್ರೆಗಳ ಮೇಲೆ ನೀರಿನ ಕಲೆ ಉಳಿಯುವುದಿಲ್ಲ ಹಾಗು ಪಾತ್ರೆಗಳು ಪಳಪಳ ಅಂತ ಹೊಳೆಯುತ್ತವೆ. ದೊಡ್ಡ ದೊಡ್ಡ ಪಾತ್ರೆಗಳನ್ನು ಬಿಸಿಲಿಗೆ ಒಣಗಲು ಇಡಿ.