ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿತ್ಯವೂ ಊಟ ಮಾಡಲೇಬೇಕು. ಊಟವೂ ಒಂದು ರೀತಿಯಾದ ವ್ಯಾಯಾಮವೇ ಸರಿ. ವ್ಯಾಯಾಮ ಮಾಡಲು ಹೇಗೆ ಕೆಲ ನಿಯಮಗಳಿವೆಯೋ ಹಾಗೆಯೇ ಊಟ ಮಾಡಲೂ ಸಹ ಕೆಲ ನಿಯಮ ಪದ್ಧತಿಗಳಿವೆ. ನಾವು ಮೊದಲು ಅವುಗಳನ್ನು ತಿಳಿದುಕೊಳ್ಳಬೇಕು. ಊಟ ಮಾಡುವುದು ಒಂದು ಶಿಸ್ತಿನ ವ್ಯಾಯಾಮ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಊಟಕ್ಕೆ ಕೂರುವ ಅಥವಾ ಊಟ ಮಾಡುವಾಗ ಹೇಗೆಲ್ಲಾ ಶಿಸ್ತನ್ನು ಪಾಲಿಸಬೇಕು ಎಂದು ನಮ್ಮ ಹಿರಿಯರು ನಮಗೆ ಪಾಠ ಹೇಳುತ್ತಾ ಬಂದಿದ್ದಾರೆ.
ಆದರೆ ನಾವು ನಮ್ಮ ಹಿರಿಯರು ಹೇಳಿಕೊಟ್ಟ ಊಟದ ಪಾಠವನ್ನು ಮರೆಯುತ್ತಾ ಇದ್ದೇವೆ ಎಂಬುದು ಮಾತ್ರ ವಿಷಾದನೀಯ. ಆಧುನಿ ಜೀವನ ಶೈಲಿ, ಒತ್ತಡದ ಜೀವನ ಹೀಗೆ ಅನೇಕ ಕಾರಣಗಳಿಂದಾಗಿ ನಾವು ಊಟದ ಶಿಸ್ತನ್ನು ಪಾಲಿಸುತ್ತಿಲ್ಲ.
ಊಟ ಮಾಡುವಾಗ ಇರಬೇಕಾದ ಶಿಸ್ತು ಎಂದರೆ ನಾವು ನೆಲದ ಮೇಲೆಯೇ ಕೂತು ಊಟ ಮಾಡಬೇಕು. ಹೀಗೆ ಮಂಡಿ ಮಡಚಿ ಚಕ್ಕಂಬಕ್ಕಳ ಹಾಕಿ ಊಟ ಮಾಡಿದರೆ ತಿಂದ ಆಹಾರ ಸರಾಗವಾಗಿ ಹಾಗು ಬೇಗನೆ ಜೀರ್ಣವಾಗುತ್ತದೆ. ನೆಲದ ಮೇಲೆ ಕೂತು ಊಟ ಮಾಡಿದರೆ ಕರುಳಿನ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಹೀಗೆ ಹಿಂದಿನ ಕಾಲದ ಜನರು ನೆಲದ ಮೇಲೆ ಕೂತು ಊಟ ಮಾಡಿ, ತುಂಬಾ ಆರೋಗ್ಯವಾಗಿರುತ್ತಿದ್ದರು. ಕಾಯಿಲೆಗಳಿಂದ ದೂರವಿದ್ದು ಹಾಗು ಅನೇಲ ವರ್ಷಗಳ ಕಾಲ ಜೀವಿಸುತ್ತಿದ್ದರು. ನೆಲದ ಮೇಲೆ ಕೂತು ಊಟ ಮಾಡಿದರೆ ಮಂಡಿಗೆ ಒಳ್ಳೆಯ ಎಕ್ಸಸೈಸ್ ಆಗುತ್ತದೆ. ದಿನವೂ ಮಂಡಿ ಮಡಚಿ ಕೂತು ಎದ್ದರೆ ವಯಸ್ಸಾದ ಮೇಲೆ ಮಂಡಿ ನೋವು ಕಾಣಿಸಿಕೊಳ್ಳುವುದು ಕಡಿಮೆ ಪ್ರಮಾಣದಲ್ಲಿರುತ್ತದೆ.
ವೈಜ್ಞಾನಿಕವಾಗಿ ಆಗು ಯೋಗಶಾಸ್ತ್ರದ ಪ್ರಕಾರವಾಗಿ ಹೇಳುವುದಾದರೆ ಊಟ ಮಾಡುವಾಗ ಕಾಲು ಮಡಚಿ ಒಂದರ ಮೇಲೊಂದು ಕಾಲು ಹಾಕಿ ಕುಳಿತಾಗ ಇದು ಒಂದು ರೀತಿಯ ಆಸನವಾಗುತ್ತದೆ. ಯೋಗದಲ್ಲಿ ಹೀಗೆ ಕೂತರೆ ಪದ್ಮಾಸನ ಎಂದು ಕರೆಯುತ್ತಾರೆ. ಪದ್ಮಾಸನ ಅನೇಕ ರೋಗಗಳನ್ನು ನಿವಾರಿಸುತ್ತದೆ. ಪದ್ಮಾಸನ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೀಗೆ ಕೂತು ಊಟ ಮಾಡಿದರೆ, ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.
ಆಫೀಸ್‌ಗಳಲ್ಲಿ ಹೊರತುಪಡಿಸಿ ಮನೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಆದಷ್ಟು ನೆಲದ ಮೇಲೆ ಕಾಲು ಮಡಚಿ ಕೂತು ಊಟ ಮಾಡಿ. ಮನೆಮಂದಿಯಲ್ಲ ಅಥವಾ ಬಂಧುಬಳಗವೆಲ್ಲಾ ಸೇರಿ ನೆಲದ ಮೇಲೆ ಕೂತು ಊಟ ಮಾಡಿದರೆ ಅದರಲ್ಲಿ ಸಿಗುವ ಖುಷಿ ಮಜವೇ ಬೇರೆ. ಹೀಗೆ ನೆಲದ ಮೇಲೆ ಕೂತು ಊಟ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ.