ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ಬಾರಿ ಬಜೆಟ್ ಮಂಡನೆ ಮಾಡಿ, ರಾಜ್ಯದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡದೇ ಗ್ಯಾರೆಂಟಿ ಹೆಸರಿನಲ್ಲಿ ಕೇವಲ ಕಲ್ಯಾಣ ಕಾರ್ಯಗಳಿಗೆ ಹಣ ಖರ್ಚು ಮಾಡುತ್ತಿರುವುದು ಕಾಯಕವಿಲ್ಲದೇ ದಾಸೋಹ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳು 15ನೇ ಬಾರಿ ಬಜೆಟ್ ಮಂಡನೆ ಮಾಡಿ ಅದನ್ನು ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವುದು ನಮಗೆ ಕುತೂಹಲ ಇದೆ. ಕಾಯಕ ಮತ್ತು ದಾಸೋಹದ ಬಗ್ಗೆ ಮಾತನಾಡಿದ್ದಾರೆ. ಇದು ನಮ್ಮ ನಾಡಿನ ಸಂಸ್ಕೃತಿ. ಕಾಯಕ ಇದ್ದರೆ ಮಾತ್ರ ದಾಸೋಹ. ಕೇವಲ ದಾಸೋಹ ಮಾಡಿಕೊಂಡು ಹೋದರೆ ಉಪಯೋಗವಿಲ್ಲ. ಕಾಯಕಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬೇಕು. ಕಾಯಕದಿಂದ ಬಂದ ಆದಾಯದಿಂದ ದಾಸೋಹ ಮಾಡಿದ್ದರೆ ತಪ್ಪಿಲ್ಲ. ಇವರ ಬಜೆಟ್ಟನ್ನು ನೋಡಿದಾಗ ಕಾಯಕ ಎಷ್ಟು ಆಗಬೇಕೊ ಅಷ್ಟು ಆಗುತ್ತಿಲ್ಲ. ಉತ್ಪಾದನೆ ಮತ್ತು ಹಂಚಿಕೆಯನ್ನು ಸರಿಯಾಗಿ ತೆಗೆದುಕೊಂಡು ಹೋಗದಿದ್ದರೆ, ಕಾಯಕ ಮತ್ತು ದಾಸೋಹಕ್ಕೆ ಮಹತ್ವ ಇಲ್ಲ ಎಂದು ಹೇಳಿದರು.
ಹಿಂದಿನ ಸರ್ಕಾರ ಆಹಾರ ಭದ್ರತೆಗೆ ಒತ್ತು ನೀಡಿತ್ತು ಎಂದು ಹೇಳಿದ್ದಾರೆ. ಇಂದಿನ ಎನ್‌ಡಿಎ ಸರ್ಕಾರ ಕೂಡ ಆಹಾರ ಭದ್ರತೆಗೆ ಆದ್ಯತೆ ನೀಡಿದೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಜನರಿಗೆ ಅಕ್ಕಿ ಸಿಗುತ್ತಿದ್ದರೆ ಅದನ್ನು ಸಂಪೂರ್ಣ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.
ಅಭಿವೃದ್ಧಿಗೆ ಹಣವಿಲ್ಲ
ಸಿದ್ದರಾಮಯ್ಯ 1 ಮತ್ತು ಸಿದ್ದರಾಮಯ್ಯ 2 ನಡುವೆ ಬಹಳ ವ್ಯತ್ಯಾಸವಿದೆ. 1994 ನಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಆಗ ಕೊರತೆ ಬಜೆಟ್ ಇತ್ತು. ಆಗ ಅವರು ಪ್ಲಾö್ಯನ್ ಸೈಝ್ ಕಡಿಮೆ ಮಾಡಿ ಬಜೆಟ್ ಮಂಡನೆ ಮಾಡಿ, ಆರ್ಥಿಕ ಶಿಸ್ತು ತಂದರು. ಆದರೆ, ಸಿದ್ದರಾಮಯ್ಯ 2 ಬಡವರ ಕಾರ್ಯಕ್ರಮ ಮಾಡಲು ಆದಾಯವನ್ನು ಕೂಡಿಸಿಕೊಂಡು ಬಂಡವಾಳ ವೆಚ್ಚಕ್ಕೆ ತೊಂದರೆಯಾಗದಂತೆ ಗ್ಯಾರೆಂಟಿಗಳನ್ನು ಜಾರಿ ಮಾಡಿದ್ದರೆ ತೊಂದರೆ ಇರುತ್ತಿರಲಿಲ್ಲ. ಇವರ ಬಜೆಟ್ ಪ್ರಕಾರ 103 ಕಮಿಟೆಡ್ ಎಕ್ಸಪೆಂಡೇಚರ್ ಆಗಿದೆ. ಅಭಿವೃದ್ಧಿಗೆ ಬಂಡವಾಳ ಎಲ್ಲಿದೆ. ಆದಾಯದ 61% ಕಮಿಟೆಡ್ ವೆಚ್ಚವಾಗಲಿದೆ. ಸಾಲ ತೆಗೆದುಕೊಂಡು ಸಾಲ ತೀರಿಸಲು ಹೆಚ್ಚು ಹಣ ಹೋಗುವುದರಿಂದ ಕೇವಲ 55 ಸಾವಿರ ಕೋಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದಿರಿ. ಕಳೆದ ಬಾರಿ ಮುದ್ರಾಂಕ, ಮೋಟಾರ ವಾಹನ, ಅಬಕಾರಿ ತೆರಿಗೆ ಹೆಚ್ಚಳ ಮಾಡಿದ್ದೀರಿ. 8 ಸಾವಿರ ಕೋಟಿ ಹೆಚ್ಚುವರಿ ಸಾಲ ಪಡೆದು, 13500 ಕೋಟಿ ಆದಾಯ ಹೆಚ್ಚಳ ಮಾಡಿಕೊಂಡರೂ ಅಭಿವೃದ್ಧಿಗೆ ಹಣ ಇಲ್ಲ. ಈ ವರ್ಷ 1.5 ಲಕ್ಷ ಕೋಟಿ ಸಾಲ ಮಾಡಿದ್ದೀರಿ. ಆದರೆ, ಅದರಲ್ಲಿ ಬಂಡವಾಳ ವೆಚ್ಚಕ್ಕೆ ಕೇವಲ 1 ಸಾವಿರ ಕೋಟಿ ಹೋಗುತ್ತದೆ. ಇದರಿಂದ ಅಭಿವೃದ್ಧಿಗೆ ಅನುಕೂಲವಾಗುವುದಿಲ್ಲ ಎಂದು ವಿವರಿಸಿದರು.
ಈಗಾಗಲೇ 7ನೇ ವೇತನ ಆಯೋಗ ರಚನೆಯಾಗಿದೆ. ಅದು ಜಾರಿಯಾದರೆ ಇನ್ನೂ 20 ಸಾವಿರ ಕೋಟಿ ರೂ. ಬೇಕಾಗುತ್ತದೆ. ಬಜೆಟ್‌ನಲ್ಲಿ ಅದಕ್ಕೆ ಹಣ ಇಟ್ಟಿಲ್ಲ. ಇದೇ ರೀತಿ ಗ್ಯಾರೆಂಟಿಗಳಿಗೆ ಹಣ ನೀಡುತ್ತ ಹೋದರೆ ಅಭಿವೃದ್ಧಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಕಳೆದ ವರ್ಷ ಇವರು 1.75 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಮಾಡುವುದಾಗಿ ಹೇಳಿದ್ದರು. ಆದರೆ, ಇವರು 1.61 ಲಕ್ಷ ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹ ಮಾಡಿದ್ದಾರೆ. 14 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹ ಕೊರತೆಯಾಗಿದೆ. ನಮ್ಮ ಅವಧಿಯಲ್ಲಿ 1.64 ಲಕ್ಷ ಕೋಟಿ ಗುರಿ ಇಟ್ಟುಕೊಂಡಿದ್ದೇವು. ಅದನ್ನೇ ಸಂಗ್ರಹ ಮಾಡಲು ಇವರಿಗೆ ಆಗಿಲ್ಲ. ಮುಂದಿನ ವರ್ಷ 1.89 ಲಕ್ಷ ಕೋಟಿ ಎಂದು ಅಂದಾಜು ಮಾಡಿದ್ದಾರೆ. ಆದಾಯ ಸಂಗ್ರಹವೇ ಇಲ್ಲ. ಈ ರೀತಿ ಆರ್ಥಿಕ ಪರಿಸ್ಥಿತಿ ನಿರ್ವಹಣೆ ಮಾಡಿದರೆ, ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸಮಾಜಿಕ ಸೇವಾ ವಲಯದಲ್ಲಿ 96 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದೀರಿ ಅದರಲ್ಲಿ 94 ಸಾವಿರ ಕೋಟಿ ಖರ್ಚು ಮಾಡಿದ್ದೀರಿ, ಆರ್ಥಿಕ ವೆಚ್ಚದ ವಲಯದಲ್ಲಿ 67 ಸಾವಿರ ಕೋಟಿ ವೆಚ್ಚದ ಬದಲು 63 ಸಾವಿರ ಕೋಟಿ ಮಾತ್ರ ವೆಚ್ಚ ಮಾಡಿದ್ದೀರಿ. 1.5 ಲಕ್ಷ ಕೋಟಿ ರೂ. ಸಾಲ ಮಾಡಿರುವುದು ದಾಖಲೆ. 96 ಸಾವಿರ ಕೋಟಿ ಮಾರುಕಟ್ಟೆಯಿಂದ ಹೆಚ್ಚು ಬಡ್ಡಿ ನೀಡಿ ತರಲಾಗುತ್ತಿದೆ. ಸಾಲ ತಂದು ಬಂಡವಾಳ ವೆಚ್ಚ ಮಾಡಿದರೆ ಅಭಿವೃದ್ಧಿಯಾಗುತ್ತದೆ. ಅದರ ಬದಲು ಕಂದಾಯ ವೆಚ್ಚ ಮಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯದ ಹಣಕಾಸು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಇವರ ಅವಧಿಯಲ್ಲಿ 2.8 ಬಿಲಿಯನ್ ಡಾಲರ್ ಎಫ್‌ಡಿಐ ಬಂದಿದೆ. ನಮ್ಮ ಅವಧಿಯಲ್ಲಿ 10 ಬಿಲಿಯನ್ ಡಾಲರ್ ಎಫ್‌ಡಿಐ ಬಂದಿತ್ತು. ಇವರ ಅವಧಿಯಲ್ಲಿ ಶೇ 41 ರಷ್ಟು ಎಫ್‌ಡಿಐ ಕಡಿಮೆಯಾಗಿದೆ. ಅಷ್ಟೇ ಅಲ್ಲದೇ 31 ಕಂಪನಿಗಳು ನಮ್ಮ ರಾಜ್ಯ ಬಿಟ್ಟು ಸಿಂಗಪೂರ್ ಸೇರಿದಂತೆ ಬೇರೆ ದೇಶಗಳಿಗೆ ಹೋಗುತ್ತಿವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೇ ಒಂದೇ ವರ್ಷದಲ್ಲಿ 54 ಸಾವಿರ ಕೋಟಿ ರೂ. ಖರ್ಚು ಮಾಡಿದರೆ, ಅಭಿವೃದ್ಧಿ ಮೇಲೆ ಹೊಡೆತ ಬೀಳುತ್ತದೆ. ಎರಡು ಮೂರು ವರ್ಷ ಯೋಜನೆಗಳು ಅನುಷ್ಠಾನಗೊಳ್ಳದಿದ್ದರೆ ರಾಜ್ಯ ಹತ್ತು ವರ್ಷ ಹಿಂದೆ ಹೋಗುತ್ತದೆ. ಆದಾಯ ಹೆಚ್ಚಳ ಮಾಡದೇ ಖರ್ಚು ಹೆಚ್ಚಳ ಮಾಡಿದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ ಎಂದು ಹೇಳಿದರು.
ಗೃಹ ಜ್ಯೋತಿ, ಭಾಗ್ಯ ಜ್ಯೋತಿ, ಯೋಜನೆ ಅಡಿಯಲ್ಲಿ ಬಿಪಿಎಲ್ ಇರುವವರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದೇನು ಹೊಸದಲ್ಲ. ಬರಗಾಲಕ್ಕೆ ರಾಜ್ಯ ಸರ್ಕಾರ 18 ಸಾವಿರ ಕೋಟಿ ಹಾನಿಯ ಪ್ರಸ್ತಾವನೆ ಕೊಟ್ಟಿರುವುದಾಗಿ ಹೇಳಿದ್ದಾರೆ. ಮನಮೋಹನ್ ಸಿಂಗ್ ಅವರೂ 9 ತಿಂಗಳು ಕಳೆದ ಮೇಲೆಕೊಟ್ಟಿದ್ದು, ನಾವು ಪ್ರವಾಹ ಬಂದಾಗ ನಿಮ್ಮ ಹಾಗೆ ಕೈಕಟ್ಟಿ ಕೂಡಲಿಲ್ಲ. ಬೆಳೆ ಪರಿಹಾರವಾಗಿ 13 ಸಾವಿರ ಕೋಟಿ ಕೊಟ್ಟಿದ್ದೇವು. ನೀವು ಬದ್ದತೆ ತೋರಿಸಬೇಕಿತ್ತು. ಈಗಾಗಲೇ ಕೇಂದ್ರ ಸರ್ಕಾರದಿಂದ 6 ಸಾವಿರ ಕೋಟಿ ಬಂದಿದೆ. ಇದರಲ್ಲಿ ನಿಮ್ಮ ಸಾಧನೆ ಏನಿದೆ ಎಂದು ಪ್ರಶ್ನಿಸಿದರು.
ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ರೈತರ ಮಕ್ಕಳಿಗೆ ನೀಡುವ ಯೋಜನೆಯಲ್ಲಿಯೂ ಜಾತಿ ವ್ಯವಸ್ಥೆ ತರುತ್ತಿದ್ದಾರೆ. ಯೋಜನೆ ಜಾರಿ ಮಾಡಲು ಆಗುವುದಿಲ್ಲ ಎಂದು ಹೇಳುವ ಬದಲು ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೇವಲ 54ರಷ್ಟು ಮಾತ್ರ ಖರ್ಚು
ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಅನುದಾನ ಶೇ ೫೪ ರಷ್ಟು ಮಾತ್ರ ಖರ್ಚು ಮಾಡಿದ್ದಾರೆ. ಅಲ್ಪ ಸಂಖ್ಯಾತ ಇಲಾಖೆ, ಹಿಂದುಳಿದ ವರ್ಗ ಇಲಾಖೆಗಳಲ್ಲಿ ಶೇ 48 ರಷ್ಟು ಖರ್ಚಾಗಿದೆ. ಎಸ್ಸಿಪಿ ಟಿಎಸ್‌ಪಿಯಲ್ಲಿ ಶೇ 50 ರಷ್ಟೂ ಖರ್ಚಾಗಿಲ್ಲ. ಕೃಷಿ 55 ಆರೋಗ್ಯ 59, ಉನ್ನತ ಶಿಕ್ಷಣ 65, ಬೃಹತ್ ಕೈಗಾಗಿಕೆ 69, ಪಿಡಬ್ಲುಡಿ 59 ರಷ್ಟು ಮಾತ್ರ ಖರ್ಚು ಮಾಡಿದ್ದಾರೆ.
ಇಲಾಖಾವಾರು ಹಂಚಿಕೆಯಲ್ಲಿ ನಾವು ನೀರಾವರಿಗೆ 19 ಸಾವಿರ ಕೋಟಿ ಇಟ್ಟಿದ್ದೇವು. ಇವರು 16 ಸಾವಿರ ಕೋಟಿ ಇಟ್ಟಿದ್ದಾರೆ. ಪಿಬಡ್ಲುಡಿ, ಸಣ್ಣ ನೀರಾವರಿ, ಕೃಷಿ ಇಲಾಖೆಗಳಿಗೆ ಅನುದಾನ ಕಡಿಮೆ ಇಟ್ಟಿದ್ದಾರೆ. ಶಾಸಕರ ಅನುದಾನ ವರ್ಷಕ್ಕೆ ಎರಡು ಕೋಟಿ ರೂ. ಕೊಡುತ್ತಾರೆ. ಆದರೆ, ಈ ವರ್ಷ ಕೇವಲ 35 ಲಕ್ಷ ಮಾತ್ರ ನೀಡಿದ್ದಾರೆ. ಈ ರೀತಿ ಮಾಡಿದರೆ ಶಾಸಕರು ಕ್ಷೇತ್ರಗಳಿಗೆ ಹೋಗುವುದು ಹೇಗೆ ? ನಮ್ಮ ಅವಧಿಯಲ್ಲಿ ಎಲ್ಲ ಶಾಸಕರಿಗೂ 25 ಕೋಟಿ ಅನುದಾನ ನೀಡಿದ್ದೇವು ಎಂದು ಹೇಳಿದರು.
ಈ ಸರ್ಕಾರದ ಅವಧಿಯಲ್ಲಿ ಸಾಲದ ಮಿತಿ 2.9 ಗೆ ಹೆಚ್ಚಿಸಿದ್ದಾರೆ. ಮುಂದಿನ ಬಾರಿ ಶೇ 3 ನ್ನು ದಾಟುತ್ತಾರೆ. ಹಣಕಾಸಿನ ನಿರ್ವಹಣೆ ಸಂಪೂರ್ಣ ವಿಫಲವಾಗಿದೆ. ಸಾಮಾಜಿಕ ನ್ಯಾಯವನ್ನು ಕೊಡಲು ಈ ಸರ್ಕಾರದಿಂದ ಕೊಡಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರಿ ನೌಕರರ ಪಿಂಚಣಿ ವಿಚಾರದಲ್ಲಿ ಎನ್‌ಪಿಎಸ್ ಬದಲಿಸಿ ಒಪಿಎಸ್ ಮಾಡುವ ವಿಚಾರದಲ್ಲಿ ಸ್ಪಷ್ಟತೆ ತೋರಿಸಲಿ, ಒಪಿಎಸ್ ಜಾರಿ ಮಾಡಲು ಮುಖ್ಯಮಂತ್ರಿಗಳು ಸಿದ್ದರಿದ್ದಾರಾ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡದೆ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಹೇಳುತ್ತಾರೆ. ರಾಜ್ಯ ಸರ್ಕಾರದ ಮಧ್ಯಂತರ ವರದಿಯಲ್ಲಿ ಹಣಕಾಸು ವ್ಯವಸ್ಥೆ ಕುಸಿದು ಬಿದ್ದರೆ, ಗ್ಯಾರೆಂಟಿಗೂ ಹಣ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಆರ್ಥಿಕ ಪರಿಸ್ಥಿತಿ ಹದಗೆಡಿಸಿದರೆ ರಾಜ್ಯದ ಅಭಿವೃದ್ದಿಯೂ ಆಗುವುದಿಲ್ಲ. ತಮ್ಮ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ತಂತಿಯ ಮೇಲೆ ನಡೆಯು ಪರಿಸ್ಥಿತಿ ಇದೆ.
ರೆಂಟಿಗಳಿಗೆ ಹೆಚ್ಚಿನ ಆದಾಯ ತರುವ ಕೆಲಸ ಮಾಡಬೇಕು. ಗ್ಯಾರೆಂಟಿಗಳ ಬಗ್ಗೆ ಪ್ರಚಾರ ಮಾಡಿದರೆ ಜನರಿಗೆ ತಲುಪುವುದಿಲ್ಲ. ಸುಳ್ಳು ಹೇಳುವುದನ್ನು ಬಿಟ್ಟು ಹಣಕಾಸಿನ ನಿರ್ವಹಣೆಗೆ ಆದ್ಯತೆ ನೀಡಿ. ಇಲ್ಲದಿದ್ದರೆ ಹಣಕಾಸು ನಿರ್ವಹಣೆ ವೈಫಲ್ಯದ ಕುಖ್ಯಾತಿಗೆ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಎಚ್ಚರಿಕೆ ನೀಡಿದರು.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಬಿಬಿಎಂಟಿಸಿ ಗುಡ್ ನ್ಯೂಸ್