ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಗಣನೀಯ ಸಂಖ್ಯೆಯ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಗಮನಸೆಳೆದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ, ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್, ಸರಳ ಮುನ್ನೆಚ್ಚರಿಕೆಗಳು ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದೊಡ್ಡ ಅಪಘಾತಗಳನ್ನು ತಪ್ಪಿಸಬಹುದು ಎಂದು ಹೇಳಿದರು.
ನಮ್ಮ ಮತ್ತು ಇತರರ ಜೀವವನ್ನು ಉಳಿಸಲು ನಾವು ಸಂಚಾರ ನಿಯಮಗಳನ್ನು ಪಾಲಿಸಬೇಕು. ಕಲಬುರಗಿ ನಗರವೊಂದರಲ್ಲೇ 129 ಜನರು ಮತ್ತು ಕಲಬುರಗಿ ಜಿಲ್ಲೆಯಲ್ಲಿ 340 ಜನರು ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ಸುಮಾರು 11,700 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳು ಮತ್ತು ಸಾವುನೋವುಗಳನ್ನು ಕಡಿಮೆ ಮಾಡಬಹುದು” ಎಂದು ಅವರು ಹೇಳಿದರು.
ಕಲಬುರಗಿಯ ಜೇವರ್ಗಿ ಕ್ರಾಸ್ ನಿಂದ ಎಸ್ ವಿಪಿ ವೃತ್ತದವರೆಗೆ ಶನಿವಾರ ನಡೆದ ರಸ್ತೆ ಸುರಕ್ಷತಾ ವಾಕಥಾನ್ ನಲ್ಲಿ ಭಾಗವಹಿಸಿದ ನಂತರ ಎಸ್ ವಿಪಿ ವೃತ್ತದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಯುನೈಟೆಡ್ ಹಾಸ್ಪಿಟಲ್ ಸಹಯೋಗದೊಂದಿಗೆ ಪೊಲೀಸ್ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.