ಬೆಂಗಳೂರು: ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳನ್ನು ಇದೇ ಮಾರ್ಚ್ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಾಶಾಸ್ತ್ರ ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದರು.
ಇಂದು ವಿಧಾನಸಭೆಯ ಅಧಿವೇಶನದ ಕಲಾಪದ ವೇಳೆ ಶಾಸಕರಾದ ನಯನಾ ಮೋಟಮ್ಮ ಮತ್ತು ಯಶಪಾಲ್ ಸುವರ್ಣ ಅವರು ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಪರಿಶೀಲಿಸಿ ವಿಲೇವಾರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ 57,651 ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 744 ಕಾರ್ಡ್‍ಗಳನ್ನು ವಿತರಿಸಲಾಗಿದೆ. ಬಾಕಿ ಇರುವ ಉಳಿದ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲು ಜಂಟಿ / ಉಪನಿರ್ದೇಶಕರುಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದಿನ ಸರಕಾರದ ಅವಧಿಯಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಚುನಾವಣೆ ಹಾಗೂ ಇನ್ನೀತರ ಕಾರಣಗಳಿಂದ ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಅವುಗಳನ್ನು ವಿಲೇವಾರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಅವುಗಳನ್ನು ಮಾರ್ಚ್ 31ರೊಳಗೆ ವಿಲೇವಾರಿ ಮಾಡಿ ಏಪ್ರಿಲ್ 1ರಿಂದ ಹೊಸ ಅರ್ಜಿಗಳ ಆಹ್ವಾನಿಸುವುದಕ್ಕೆ ಅವಕಾಶ ನೀಡಲಾಗುವುದು ಎಂದರು.
ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹೊಸದಾಗಿ ಆದ್ಯತಾ ಪಡಿತರ ಚೀಟಿ ಕೋರಿ ತಹಸೀಲ್ದಾರ ಶಿಫಾರಸ್ಸು ವರದಿ ಆಧರಿಸಿ ಬರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಕಾರ್ಡ್ ಒದಗಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ 2021 ಜನವರಿಯಿಂದ 2023 ಮಾರ್ಚ್ ವರೆಗೆ 13,104 ಆದ್ಯತಾ ಪಡಿತರ ಚೀಟಿ ಕೋರಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 10738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದವುಗಳನ್ನು ಪರಿಶೀಲಿಸಿ ಅರ್ಹ ಅರ್ಜಿಗಳಿಗೆ ಕಾರ್ಡ್ ಒದಗಿಸುವುದಕ್ಕೆ ಕ್ರಮವಹಿಸಲಾಗುವುದು ಎಂದು ವಿವರಿಸಿದ ಸಚಿವ ಮುನಿಯಪ್ಪ ಅವರು ಉಡುಪಿ ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 134 ಅರ್ಹ ಫಲಾನುಭವಿಗಳಿಗೆ ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದರು.
ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅರ್ಹತೆ
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಈಗಾಗಲೇ ಪಡಿತರ ಚೀಟಿ ಹೊಂದಿರದೇ ಇರೋರು ಅರ್ಜಿ ಸಲ್ಲಿಸಬಹುದು
ಹೊಸದಾಗಿ ಮದುವೆಯಾದ ದಂಪತಿಗಳು, ಹೊಸ ಪಡಿತರ ಚೀಟಿಗಾಗಿ ಅರ್ಜಿ ಹಾಕಬಹುದು
ಕುಟುಂಬದ ಆದಾಯದ ಮೇಲೆ ಪಡಿತರ ಚೀಟಿ ಬಿಪಿಎಲ್, ಎಪಿಎಲ್ ಎಂಬುದು ನಿರ್ಧರಿತವಾಗಿರಲಿದೆ.
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬೇಕಿರುವ ಅಗತ್ಯ ದಾಖಲೆಗಳು
ವೋಟರ್ ಐಡಿ
ಆಧಾರ್ ಕಾರ್ಡ್
ವಯಸ್ಸಿನ ಪ್ರಮಾಣ ಪತ್ರ
ಡ್ರೈವಿಂಗ್ ಲೈಸೆನ್ಸ್
ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
ಮೊಬೈಲ್ ಸಂಖ್ಯೆ
ಸ್ವಯಂ ಘೋಷಿತ ಪ್ರಮಾಣ ಪತ್ರ
ಈ ಮೇಲ್ಕಂಡ ದಾಖಲೆಗಳಿದ್ದಲೇ, ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಹಾಗಾದ್ರೇ ಅರ್ಜಿ ಸಲ್ಲಿಸೋದು ಹೇಗೆ ಎನ್ನುವ ಹಂತ ಈ ಕೆಳಗಿದೆ.
ಹೊಸ ಪಡಿತರ ಚೀಟಿಗಾಗಿ ಈ ಹಂತಗಳನ್ನು ಅನುಸರಿಸಿ, ಅರ್ಜಿ ಸಲ್ಲಿಸಿ
kar.nic.in ಈ ಅಧಿಕೃತ ವೆಬ್ ಸೈಟ್ ತಾಣಕ್ಕೆ ಭೇಟಿ ನೀಡಬೇಕು.
ಈ ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ಮುಖಪುಟದಲ್ಲಿನ ಇ-ಸೇವೆಗಳು ಎಂಬಲ್ಲಿ ಕ್ಲಿಕ್ ಮಾಡಿ.
ಇದಲ್ಲದೇ https://ahara.kar.nic.in/Home/EServices ತಾಣಕ್ಕೂ ನೇರವಾಗಿ ಕ್ಲಿಕ್ ಮಾಡಬಹುದಾಗಿದೆ.
ಈ ಜಾಲತಾಣದಲ್ಲಿ ಕ್ಲಿಕ್ ಮಾಡಿದ ನಂತ್ರ, ನೀವು ಇ-ಪಡಿತರ ಚೀಟಿ ಆಯ್ಕೆ. ಆ ಬಳಿಕ ಕೆಳಗಡೆ ಸ್ಕ್ರಾಲ್ ಮಾಡಿದ್ರೇ.. ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸೋ ಲಿಂಕ್ ಸಿಗಲಿದೆ. ಅಲ್ಲಿ ಕ್ಲಿಕ್ ಮಾಡಿ
ಈ ಬಳಿಕ ನೀವು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಭಾಷೆಯನ್ನು ಆಯ್ಕೆ ಮಡಿ, ಅಲ್ಲಿ ಕೇಳುವಂತ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
ನೀವು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಆಯ್ಕೆ ಮಾಡಿಕೊಂಡು ನಮೂದಿಸಿ.
ಈ ಬಳಿಕ ಅರ್ಜಿಯ ಜೊತೆಗೆ ಕೇಳುವಂತ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ ಲೋಡ್ ಮಾಡಿ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿ