ಕೆಎನ್ಎನ್ಸಿನಿಮಾಡೆಸ್ಕ್: ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ಶ್ರೇಯಸ್ ಮಂಜು ಅಭಿನಯದ ವಿಷ್ಣುಪ್ರಿಯನ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು, ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆ ನಿರ್ಮಾಣ ಮಾಡಿದೆ.
ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ.. ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ…’ ಎಂಬ ಸಾಲಿನಿಂದ ಶುರುವಾಗುವ ಈ ಗೀತೆಯು ಸಂಗೀತ ಮತ್ತು ಸಾಹಿತ್ಯದ ಜೊತೆಗೆ ರೊಮ್ಯಾಂಟಿಕ್ ಆದ ದೃಶ್ಯದ ಮೂಲಕವೂ ಗಮನ ಸೆಳೆಯುತ್ತಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ನಜೀನ್ ಅರ್ಷಾದ್ ಕಂಠಸಿರಿಯಲ್ಲಿ ಈ ಹಾಡು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ಕೇರಳದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕನ್ನಡದಲ್ಲಿಯೂ ಕಮಾಲ್ ಮಾಡಿದ್ದಾರೆ. ಈ ವರ್ಷದ ಸುಮಧುರ ಹಾಡು ಎಂದು ಗುರುತಿಸಿಕೊಳ್ಳುವ ಎಲ್ಲ ಗುಣಗಳೂ ಈ ಹಾಡಿಗೆ ಇದೆ. ವಿ.ಕೆ. ಪ್ರಕಾಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಗಂಡುಗಲಿ ಕೆ.ಮಂಜು ನಿರ್ಮಾಣದ ವಿಷ್ಣುಪ್ರಿಯ ಚಿತ್ರದಲ್ಲಿ ಸುಚೇಂದ್ರಪ್ರಸಾದ್, ಅಚ್ಯುತ್ ಕುಮಾರ್ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರೇಮಕಥೆ ಮಾತ್ರವಲ್ಲ; ತೊಂಬತ್ತರ ದಶಕದಲ್ಲಿ ನಡೆದಿದ್ದ ನೈಜ ಕಥನವೂ ಈ ಸಿನಿಮಾ ಹೊಂದಿದೆ ಎನ್ನಲಾಗಿದೆ. ಶ್ರೇಯಸ್ ಮಂಜು ವಿಷ್ಣುಪ್ರಿಯನಾಗಿ, ವಿಶಿಷ್ಟವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.