ಬೆಂಗಳೂರು: 2023-24 ನೇ ಸಾಲಿನ ರಾಜ್ಯ ಪಠ್ಯಕ್ರಮದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ಫೆಬ್ರವರಿ 26 ರಿಂದ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಸದರಿ ಪರೀಕ್ಷೆಗೆ ತಗಲುವ ವೆಚ್ಚದ ಬಾಬು ರೂ.50/-ಗಳನ್ನು ಪ್ರತಿ ವಿದ್ಯಾರ್ಥಿಯಿಂದ ಶಾಲಾ ಹಂತದಲ್ಲಿ ಸಂಗ್ರಹಿಸುತ್ತಿರುವ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿರುವುದು ಮಂಡಲಿಯ ಗಮನಕ್ಕೆ ಬಂದಿರುತ್ತದೆ ಹಾಗಾಗಿ ಮಂಡಲಿ ವತಿಯಿಂದ ನಡೆಸುವ ಪೂರ್ವ ಸಿದ್ಧತಾ ಪರೀಕ್ಷೆ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಈ ಕುರಿತು ಸ್ಪಷ್ಟೀಕರಣ ನೀಡಿದೆ.
ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಕಳೆದ 4 ವರ್ಷಗಳಿಂದಲೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ನಡೆಸಲಾಗುತ್ತಿದೆ. ಈ ಸಂಬಂಧ 2022-23ನೇ ಸಾಲಿನ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ತಗಲುವ ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿ ವಿದ್ಯಾರ್ಥಿಯಿಂದ ರೂ.50/- ಗಳನ್ನು ಸಂಗ್ರಹ ಮಾಡಿ ಪರೀಕ್ಷೆ ನಡೆಸಲು ಸರ್ಕಾರಿ 2023ರ ಫೆಬ್ರವರಿಯಲ್ಲಿ ಸರ್ಕಾರಿ ಆದೇಶವಾಗಿರುತ್ತದೆ. ಅದೇ ರೀತಿ ಈ ಸಾಲಿನಲ್ಲಿಯೂ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಗೂ ಕೂಡ ಪ್ರತಿ ವಿದ್ಯಾರ್ಥಿಯಿಂದ ರೂ.50/-ಗಳನ್ನು ಶಾಲಾ ಹಂತದಲ್ಲಿ ಸಂಗ್ರಹ ಮಾಡಿ ಪರೀಕ್ಷಾ ವೆಚ್ಚ ಭರಿಸಲು ಕ್ರಮವಹಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.