ಕೊಡಗು: ರಾಜ್ಯದ ಎಲ್ಲಾ ತಾಲೂಕುಗಳ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವಂತ ತಕರಾರು ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡೋದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕೊಡಗಿನ ಎಲ್ಲಾ ತಾಲೂಗಳ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇರುವ ತಕರಾರು ಪ್ರಕರಣಗಳ ವಿಲೇವಾರಿ ಚುರುಕುಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಐದು ತಿಂಗಳ ಹಿಂದೆ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟ 2315 ಪ್ರಕರಣಗಳಿದ್ದವು. ಆದರೆ, ಈ ಪ್ರಕರಣಗಳ ಸಂಖ್ಯೆ ಇದೀಗ ಕೇವಲ 107 ಕ್ಕೆ ಇಳಿದಿದೆ. ಈ ಮೊದಲು ಒಂದು ಪ್ರಕರಣದ ಇತ್ಯರ್ಥಕ್ಕೆ 260 ದಿನಗಳು ತೆಗೆದುಕೊಳ್ಳುತ್ತಿತ್ತು. ಆದರೆ, ಪ್ರಸ್ತುತ 90 ದಿನಗಳಲ್ಲೇ ತಕರಾರು ಪ್ರಕರಣಗಳು ಇತ್ಯರ್ಥವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಆದರೆ, ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥ ಇನ್ನೂ ವೇಗಗೊಂಡಿಲ್ಲ. ಎಸಿ ಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಎಂದು ಸಚಿವರು ಸೂಚಿಸಿದರು.