ಕೊಡಗು: ಬರ ಪರಿಹಾರ ನಿರೀಕ್ಷೆಯಲ್ಲಿದ್ದಂತ ರೈತರಿಗೆ ಸಿಹಿಸುದ್ದಿ ಎನ್ನುವಂತೆ ಸರ್ಕಾರದಿಂದ 32 ಲಕ್ಷ ರೈತರಿಗೆ 575 ಕೋಟಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತಂತೆ ಸೋಮವಾರದಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ರಾಜ್ಯಾದ್ಯಂತ ಬರ ಪೀಡಿತ ಪ್ರದೇಶಗಳಲ್ಲಿ ಪ್ರತಿ ರೈತರಿಗೆ ತಲಾ 2,000 ರೂ. ನಂತೆ 32 ಲಕ್ಷ ರೈತರಿಗೆ ಈವರೆಗೆ 575 ಕೋಟಿ ರೂ. ಹಣವನ್ನು ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈ ವರ್ಷ ಇತಿಹಾಸ ಕಾಣದ ಬರ ಎದುರಾಗಿದೆ. ಕೇಂದ್ರದಿಂದ ಬರ ಪರಿಹಾರ ಈವರೆಗೆ ಲಭ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಮೊದಲ ಕಂತಿನಲ್ಲಿ ರೈತರಿಗೆ 2,000 ರೂ ನೀಡಲು ನಿರ್ಧರಿಸಿ ಈಗಾಗಲೇ 32 ಲಕ್ಷ ರೈತರಿಗೆ ಪರಿಹಾರದ ಹಣ ನೀಡಲಾಗಿದೆ. ಕೊಡಗಿನಲ್ಲೂ ಸಹ 11,000 ರೈತರಿಗೆ 1.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಂದುವರೆದು, ರೈತರ ಪರಿಹಾರದ ಹಣ ದುರುಪಯೋಗ ತಡೆಗಟ್ಟಲು ಈ ಬಾರಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಫ್ರೂಟ್ಸ್ ತಂತ್ರಾಂಶದ ಮೂಲಕ ಎಲ್ಲಾ ರೈತರಿಗೆ ಪರಿಹಾರದ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾರದರ್ಶಕವಾಗಿ ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದರು.