ಬೆಂಗಳೂರು: ವಿಲೇಜ್ ಅಕೌಂಟ್ ಆಫೀಸರ್ ನೇಮಕಾತಿಯನ್ನು ಈ ಮೊದಲು ದ್ವಿತೀಯ ಪಿಯುಸಿಯಲ್ಲಿ ಗಳಿಸಿದಂತ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈಗ ರಾಜ್ಯ ಸರ್ಕಾರದಿಂದ ವಿಎ ನೇಮಕಾತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಇನ್ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅದರಲ್ಲಿ ಗಳಿಸಿದಂತ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳೋ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಕರ್ನಾಟಕ ಜನರಲ್ ಸರ್ವಿಸ್ (ಕಂದಾಯ ಅಧೀನ ಶಾಖೆ) (ಕೇಡರ್ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು 2024ಕ್ಕೆ ತಿದ್ದುಪಡಿ ತಂದು ಬದಲಾವಣೆ ತರಲಾಗುತ್ತಿದೆ. ವಿಲೇಜ್ ಅಕೌಂಟ್ಸ್ ನೇಮಕಾತಿ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ ಎಂದಿದೆ.
ವಿಲೇಜ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ನೇಮಕಾತಿಯನ್ನು ನೇರ ನೇಮಕಾತಿಯ ಮೂಲಕ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ನಿಗದಿ ಪಡಿಸಿ, ಅದರಲ್ಲಿ ಗಳಿಸಿದಂತ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ವಿಲೇಜ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಯ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ನೇಮಕಾತಿಯ ನಂತ್ರ ಆರು ತಿಂಗಳಿಗೆ ಕಡಿಮೆ ಇಲ್ಲದಂತೆ ತರಬೇತಿಯನ್ನು ಪಡೆಯಬೇಕು. ಪ್ರೊಬೇಷನರಿ ಸಮಯವನ್ನು ಮುಗಿಸಿದ ಬಳಿಕ ರಾಜ್ಯ ಸರ್ಕಾರ ನಡೆಸುವಂತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದಿದೆ.
ವಿಲೇಜ್ ಅಕೌಂಟ್ ಅಡ್ಮಿನಿಸ್ಟ್ರೇಟಿವ್ ಹುದ್ದೆಗೆ ಅರ್ಜಿ ಸಲ್ಲಿಸೋದಕ್ಕೆ ದ್ವಿತೀಯ ಪಿಯುಸಿ ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಹೊರಡಿಸಿರುವಂತ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.