ಬೆಂಗಳೂರು: ʼಕಂದಾಯ ಅದಾಲತ್ʼ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸುವ ಸಂಬಂಧ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ದಿನಾಂಕ ಘೋಷಿಸಲಾಗುವುದು. ಒಂದೇ ಸೂರಿನ ಅಡಿಯಲ್ಲಿ ಜನಸಾಮಾನ್ಯರ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಮರುಚಾಲನೆ ನೀಡುವ ಸಂಬಂಧ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಸರ್ಕಾರದ ಆದೇಶದಲ್ಲಿ ಗಣಕೀಕೃತ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ರಾಜ್ಯಾದ್ಯಂತ ಮತ್ತೊಮ್ಮೆ ಕಂದಾಯ ಅದಾಲತ್ ಆಂದೋಲನವನ್ನು ಕೈಗೊಳ್ಳಬೇಕು. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ನೀಡಬೇಕು” ಎಂದು ಸೂಚಿಸಿದರು.
ರಾಜ್ಯಾದ್ಯಂತ ಕಂದಾಯ ಅದಾಲತ್ ಆಂದೋಲನ
ಕಾಲಕಾಲಕ್ಕೆ ಪಹಣಿ ತಿದ್ದುಪಡಿ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರರಿಗೆ ಪ್ರತ್ಯಾಯೋಜಿಸಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಅದರನ್ವಯ, ಈ ಅಧಿಕಾರ ಪ್ರತ್ಯಾಯೋಜನೆಯು ದಿನಾಂಕ 2023ರ ಡಿಸೆಂಬರ್ 31ರಂದು ಮುಕ್ತಾಯಗೊಂಡಿತ್ತು. ಕಂದಾಯ ಅದಾಲತ್ ಕಾರ್ಯಕ್ರಮದಡಿಯಲ್ಲಿ ಆಕಾರ್ಬಂದ್ ಮತ್ತು ಪಹಣಿ ಕಾಲಂ 3 ಮತ್ತು 9ರ ನಮೂದಿನಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ದೋಷಪೂರಿತ ಪಹಣಿಗಳನ್ನು ಸರಿಪಡಿಸಲಾಗುತ್ತಿದ್ದು, 2022-23ನೇ ಸಾಲಿನಲ್ಲಿ ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಹೆಚ್ಚಿನ ಸಂಖ್ಯೆ ಪಹಣಿಗಳನ್ನು ಸರಿಪಡಿಸಿರುವುದು ಕಂಡ ಬಂದಿದೆ. 2022-2023 ಸಾಲಿನ ಪ್ರಗತಿಯನ್ನು ಅವಲೋಕಿಸಲಾಗಿ ಈ ಕಾರ್ಯಕ್ರಮವನ್ನು ಮತ್ತೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ತಿಳಿಸಿದರು.
ಕಂದಾಯ ಅದಾಲತ್ ಆಂದೋಲನದ ಮೂಲಕ ಪಹಣಿ ತಿದ್ದುವ ಕಾರ್ಯವನ್ನು ಮುಂದುವರೆಸುವುದು ಬಹಳ ಅವಶ್ಯಕವಾಗಿದೆ ಈ ಮೂಲಕ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅನುಕೂಲವಾಗಿರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.