ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಉಚಿತವಾಗಿ ಉತ್ತಮ ಡಯಾಲಿಸಿಸ್ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಹೊಸ ಡಯಾಲೈಸರ್ ಯಂತ್ರಗಳ ಸೇವೆಗೆ ಚಾಲನೆ ನೀಡಿದೆ. ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೂತನ ಡಯಾಲಿಸಿಸ್ ಯಂತ್ರಗಳ ಸೇವೆಗೆ ಚಾಲನೆ ನೀಡಿದರು. ರಾಜ್ಯದಲ್ಲಿದ್ದ 171 ಡಯಾಲಿಸಿಸ್ ಕೇಂದ್ರಗಳನ್ನ 219ಕ್ಕೆ ಹೆಚ್ಚಿಸಲಾಗಿದ್ದು, 800 ಹೊಸ ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲಾಗುತ್ತಿದೆ.
ಬೆಂಗಳೂರು ವಿಭಾಗದ 57 ಡಯಾಲಿಸಿಸ್ ಕೇಂದ್ರಗಳಲ್ಲಿ 250 ಯಂತ್ರಗಳು, ಮೈಸೂರು ವಿಭಾಗದ 55 ಕೇಂದ್ರಗಳಲ್ಲಿ 222 ಯಂತ್ರಗಳು, ಬೆಳಗಾವಿ ವಿಭಾಗದ 62 ಕೇಂದ್ರಗಳಲ್ಲಿ 201 ಯಂತ್ರಗಳು, ಕಲಬುರಗಿ ವಿಭಾಗದ 45 ಕೇಂದ್ರಗಳಲ್ಲಿ 127 ಯಂತ್ರಗಳು ಸೇರಿದಂತೆ ಒಟ್ಟು 800 ಏಕಬಳಕೆಯ ಡಯಾಲೈಸರ್ ಗಳ ಅಳವಡಿಕೆ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದಿನಿಂದ 475 ಏಕಬಳಕೆಯ ಡಯಾಲೈಸರ್ ಗಳು ಕಾರ್ಯ ಆರಂಭಿಸಿವೆ. ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 20 ನೂತನ ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಇಂದು ಚಾಲನೆ ನೀಡಿದರು.
ಉಚಿತವಾಗಿ ಸೋಂಕು ರಹಿತ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಲಾಗಿದೆ – ದಿನೇಶ್ ಗುಂಡೂರಾವ್
ನೂತನ ಡಯಾಲಿಸಿಸ್ ಯಂತ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡಯಾಲಿಸಿಸ್ ಆರೋಗ್ಯ ಸೇವೆಯನ್ನ ಸದೃಢಗೊಳಿಸುವತ್ತ ಆರೋಗ್ಯ ಇಲಾಖೆ ಹಾಗೂ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು. ಎಲ್ಲೆಡೆ ಈ ಹಿಂದೆ ಇದ್ದ ಡಯಾಲಿಸಿಸ್ ವ್ಯವಸ್ಥೆ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿತ್ತು. ಬಹುಬಳಕೆಯ ಡಯಾಲಿಸಿಸ್ ಯಂತ್ರಗಳಿಂದ ಕೆಲವೊಮ್ಮ ರೋಗಿಗಳಿಗೆ ಸೋಂಕು ತಗುಲುತ್ತಿತ್ತು. ಅಲ್ಲದೇ ಸಾಕಷ್ಟು ಯಂತ್ರಗಳು ಡಯಾಲಿಸಿಸ್ ನಡೆಸುವ ವೇಳೆ ಕೆಟ್ಟು ನಿಲ್ಲುತ್ತಿದ್ದವು. ಇದೆಲ್ಲವನ್ನ ಗಮನಿಸಿ ರಾಜ್ಯದಾದ್ಯಂತ ಹೊಸ ಡಯಾಲಿಸಿಸ್ ಯಂತ್ರಗಳನ್ನ ಸರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಸಲು ತೀರ್ಮಾನಿಸಿದ್ದೇವು. ನಾವು ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಇಂದು ಫಲ ನೀಡುತ್ತಿದೆ. ಸೋಂಕು ರಹಿತ ಡಯಾಲಿಸಿಸ್ ಆರೋಗ್ಯ ಸೇವೆ ಇನ್ಮುಂದೆ ರಾಜ್ಯದ ಜನಸಾಮಾನ್ಯರಿಗೆ ದೊರಯಲಿದೆ ಎಂದರು.
800 ಏಕಬಳಕೆಯ ಡಯಾಲೈಸರ್ ಯಂತ್ರಗಳಿಂದ ವಾರ್ಷಿಕ 7.20 ಲಕ್ಷ ಡಯಾಲಿಸಿಸ್ ಸೇವೆಗಳನ್ನ ಒದಗಿಸುವ ಸಾಮರ್ಥ್ಯ ಕಲ್ಪಿಸಲಾಗಿದೆ. ವಿಭಾಗವಾರು ಟೆಂಡರ್ ಮೂಲಕ ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗಗಳಲ್ಲಿ ನೂತನ ಡಯಾಲೈಸರ್ ಯಂತ್ರಗಳು ಅಳವಡಿಕೆಯಾಗಿವೆ. ಕಲಬುರಗಿ ವಿಭಾಗದಲ್ಲಿ ಮಾತ್ರ 127 ಹೊಸ ಯಂತ್ರಗಳ ಅಳವಡಿಕೆ ಕಾರ್ಯ ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಜ್ಯದಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನ ಸರಿ ದಾರಿಗೆ ತರುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಬಡವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದುಬಾರಿ. ಹೀಗಾಗಿ ಸರ್ಕಾರ ಈ ಸೇವೆಯನ್ನ ಉಚಿತವಾಗಿ ನೀಡುವತ್ತ ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಯೋಜನೆ ಜಾರಿಗೆ ತಂದಿದ್ದರು. ಇದೀಗ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಮತ್ತೆ ಉಚಿತ ಡಯಾಲಿಸಿಸ್ ಸೇವೆಯನ್ನ ಸದೃಢಗೊಳಿಸುತ್ತಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆ – ಸಿಎಂ ಸಿದ್ದರಾಮಯ್ಯ
ನೂತನ ಡಯಾಲಿಸಿಸ್ ಯಂತ್ರಗಳ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು. ಬಡವರಿಗೆ ಖಾಸಗಿ ವಲಯದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಹೊರೆಯಾಗಿತ್ತು. ಹೀಗಾಗಿ ಉಚಿತ ಡಯಾಲಿಸಿಸ್ ಸೇವೆಯನ್ನ ಸರ್ಕಾರದಿಂದ ಒದಗಿಸಲಾಗಿತ್ತು. ವ್ಯವಸ್ಥೆಯಲ್ಲಿದ್ದ ಕುಂದು ಕೋರತೆಗಳನ್ನ ಅರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡಯಾಲಿಸಿಸ್ ಸೇವೆಯನ್ನ ಸದೃಢಗೊಳಿಸುವ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಬಗ್ಗೆ ಕಾಳಜಿ ವಹಿಸಿ ಸೇವೆ ಒದಗಿಸಬೇಕು. ಬಡವರಿಗೆ ಅನೂಕುಲವಾಗುವ ಡಯಾಲಿಸಿಸ್ ಆರೋಗ್ಯ ಸೇವೆಯನ್ನ ಇನ್ನಷ್ಟು ಹೆಚ್ಚಳ ಮಾಡುತ್ತೇವೆ. ಆರೋಗ್ಯ ಇಲಾಖೆಯನ್ನ ಸುಧಾರಣೆಯತ್ತ ದಿನೇಶ್ ಗುಂಡೂರಾವ್ ಕೊಂಡೊಯ್ಯಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದರು.
ಕೆ.ಸಿ ಜನರಲ್ ಆಸ್ಪತ್ರೆ ಮೇಲ್ದರ್ಜೆಗೆ
ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ, 150 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸುವುದಾಗಿ ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆ.ಸಿ ಜನರಲ್ ಆಸ್ಪತ್ರೆ ತುಂಬ ಹಳೆಯ ಆಸ್ಪತ್ರೆ. ಇಲ್ಲಿಗೆ ಸಾಕಷ್ಟು ರೋಗಿಗಳ ಬರುತ್ತಾರೆ. 150 ಕೋಟಿ ವೆಚ್ಚದಲ್ಲಿ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ದಿನೇಶ್ ಗುಂಡೂರಾವ್ ಪ್ರಸ್ತಾವನೆಯನ್ನ ಕ್ಯಾಬಿನೆಟ್ ಗೆ ತರುವುದಾಗಿ ಹೇಳಿದ್ದಾರೆ. ಕ್ಯಾಬಿನೆಟ್ ನಲ್ಲಿ ಪ್ರಸ್ತಾವನೆಗೆ ನಾವು ಒಪ್ಪಿಗೆ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
‘ಗ್ಯಾರಂಟಿ ಯೋಜನೆ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ‘ಫೆಬ್ರವರಿ’ಯಲ್ಲಿ ಎಲ್ಲಾ ತಾಲೂಕುಗಳಲ್ಲಿ ‘ಸಮಾವೇಶ’
Covid19 Update: ರಾಜ್ಯದಲ್ಲಿಂದ 103 ಜನರಿಗೆ ಕೊರೋನಾ, 134 ಮಂದಿ ಗುಣಮುಖ