ಬೆಂಗಳೂರು : “ಹಿಂದೂಗಳಿಗೆ ಭಗವದ್ಗೀತೆ, ಮುಸಲ್ಮಾನರಿಗೆ ಖುರಾನ್, ಕ್ರೈಸ್ತರಿಗೆ ಬೈಬಲ್ ಹೇಗೆ ಪವಿತ್ರ ಗ್ರಂಥವೋ ಅದೇರೀತಿ ಪ್ರತಿಯೊಬ್ಬ ಭಾರತೀಯನಿಗೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಪವಿತ್ರ ಗ್ರಂಥ. ಇದನ್ನು ತಿರುಚಲು ಅವಕಾಶ ನೀಡಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಆನೇಕಲ್ ನಲ್ಲಿ ನಡೆದ ‘ಸಂವಿಧಾನ ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೆ ಪವಿತ್ರ ಗ್ರಂಥ. ಪ್ರಜಾಪ್ರಭುತ್ವ ಎಂದರೆ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ಜನ ಪ್ರತಿನಿಧಿಗಳನ್ನು ಜನರೇ ಆಯ್ಕೆ ಮಾಡುವ ವ್ಯವಸ್ಥೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ರಕ್ಷಣೆ ನೀಡಲಾಗಿದೆ.
ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಯಾವುದೇ ಒಂದು ಜಾತಿ, ಧರ್ಮ ಹಾಗೂ ವರ್ಗಕ್ಕೆ ಸೇರಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡು ಸಹಾಯ ಮಾಡುವುದು ಕಾಂಗ್ರೆಸ್ ಪಕ್ಷದ ತತ್ವ.
ಕಾಂಗ್ರೆಸ್ ಪಕ್ಷ ನೀಡಿರುವ ಐದೂ ಗ್ಯಾರಂಟಿ ಯೋಜನೆಗಳು ಎಲ್ಲಾ ಸಮುದಾಯದವರಿಗೂ ಸೇರಿದೆ. ಜಾತಿ, ಧರ್ಮ ಆಧಾರದ ಮೇಲೆ ಈ ಯೋಜನೆ ನೀಡುತ್ತಿಲ್ಲ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಎಲ್ಲ ವರ್ಗದವರಿಗೂ ನೀಡಲಾಗುತ್ತಿದೆ. ಇದೇ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ತತ್ವವಾಗಿದೆ.
ಮೋದಿ ಅವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದರು. ಆದರೆ ಈಗ ಮಾಧ್ಯಮಗಳಲ್ಲಿ ಮೋದಿ ಗ್ಯಾರಂಟಿ ಎಂದು ಜಾಹೀರಾತು ಪ್ರಕಟಿಸಿ ನಮ್ಮ ವಿಚಾರವನ್ನು ಕಾಪಿ ಮಾಡುತ್ತಿದ್ದಾರೆ.
ಅಂಬೇಡ್ಕರ್ ಅವರು ‘ನೀನು ಹೋರಾಟ ಮಾಡದಿದ್ದರೂ ಮಾರಾಟ ಆಗಬೇಡ’ ಎಂದು ಹೇಳಿದ್ದಾರೆ. ನಿನ್ನಲ್ಲಿರುವ ಮೌಲ್ಯಗಳು, ಶಕ್ತಿಗಳನ್ನು ಮಾರಾಟ ಮಾಡಿಕೊಳ್ಳಬೇಡ ಎಂಬುದು ಅವರ ಮಾತಿನ ಆರ್ಥ.
ಜಾತಿ ಧರ್ಮಗಳ ನಡುವಿನ ಮೇಲು ಕೀಳು ಭಾವನೆ ಅಳಿಸಿ. ನಾವು ಭಾರತೀಯರು ಎಂಬ ಸತ್ಯವನ್ನು ಸಾರಿ, ಸಂವಿಧಾನವನ್ನು ಅರ್ಪಿಸಿಕೊಂಡಿದ್ದೇವೆ.
ಇಂದು ಸ್ವಾತಂತ್ರ್ಯ ಸಂಗ್ರಾಮದ ಧೀಮಂತ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರನ್ನು ಗಲ್ಲಿಗೇರಿಸಿದ ದಿನವೂ ಆಗಿದೆ. ಸಂವಿಧಾನ ರಾಮ ರಾಜ್ಯದ ಬುನಾದಿ. ಈ ಸಂವಿಧಾನ ಜಾಗೃತಿ ಜಾಥಾ ಪ್ರತಿ ಹಳ್ಳಿಗೂ ತೆರಳಲಿದೆ. ಎಲ್ಲಾ ಪಂಚಾಯ್ತಿಗಳಿಗೆ ಈ ಜಾಥಾ ಹೋದಾಗ ನೀವು ಅದನ್ನು ಬರಮಾಡಿಕೊಂಡು ಸಂವಿಧಾನದ ಪ್ರಾಮುಖ್ಯತೆ ಹಾಗೂ ಜನರ ಬದುಕಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಭದ್ರತೆ ಬಗ್ಗೆ ಅರಿವು ಮೂಡಿಸಬೇಕು.
ದೇವರು ನಮಗೆ ವರವನ್ನೂ ನೀಡುವುದಿಲ್ಲ, ಶಾಪವನ್ನು ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು.
ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ 5-6 ಸಾವಿರ ರೂ. ಉಳಿತಾಯವಾಗುತ್ತದೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ನಾವು ನಮ್ಮ ಕೈಲಾದಷ್ಟು ಬೇರೆಯವರಿಗೆ ಸಹಾಯ ಮಾಡಬೇಕು.
BIG NEWS : ಬಿಜೆಪಿ ಜೆಡಿಎಸ್ ನಿಂದ 30 ಜನ ಬರ್ತಾರೆ : ಸ್ಪೋಟಕ ಹೇಳಿಕೆ ನೀಡಿದ ಸಚಿವ ಚೆಲುವರಾಯಸ್ವಾಮಿ
ಸೆಲೆಬ್ರಿಟಿಗಳ 1,000 ಕ್ಕೂ ಹೆಚ್ಚು ‘ಡೀಪ್ಫೇಕ್’ ಹಗರಣ ಜಾಹೀರಾತು ವೀಡಿಯೊಗಳನ್ನು ಅಳಿಸಿದ YouTube