ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಇಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ. ದೇಶದ ಪ್ರತಿಯೊಂದು ರಾಜ್ಯವನ್ನು ಪ್ರಗತಿಪಥದಲ್ಲಿ ಒಯ್ಯುವ ಹಾಗೂ 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ಅವರು ಸಂಕಲ್ಪ ತೊಟ್ಟಿದ್ದಾರೆ. ಅದು ನನಸಾಗಲಿದೆ ಎಂದರು.
ಮೋದಿಜೀ ಅವರ ಕರೆಗೆ ಓಗೊಟ್ಟು ಅಯೋಧ್ಯೆ ರಾಮಲಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮನೆಮನೆಯಲ್ಲೂ ದೀಪ ಹಚ್ಚಿದ ಹಿಂದೂಗಳಿಗೆ ಮತ್ತು ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಜನರ ನಿರೀಕ್ಷೆ, ಕೋಟಿ ಕೋಟಿ ರಾಮಭಕ್ತರ ಅಪೇಕ್ಷೆಯಂತೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿದೆ. ದೇಶದ ಮೂಲೆಮೂಲೆಯಿಂದ ಬಂದ ಸಾಧುಸಂತರ ಸಮಕ್ಷಮದಲ್ಲಿ ಇದು ನಡೆದಿದೆ. ದೇಶದ ಪ್ರತಿಯೊಬ್ಬ ಹಿಂದೂಗಳ ಹೃದಯದಲ್ಲಿ ಪ್ರಭು ಶ್ರೀರಾಮನ ಭಕ್ತಿ- ಶ್ರದ್ಧೆಯ ಜಾಗೃತಿ ಮೂಡಿದೆ. ಪ್ರಾಣ ಪ್ರತಿಷ್ಠಾಪನೆಯು ಎಲ್ಲ ಹಿಂದೂಗಳ ಹಬ್ಬವಾಗಿ ಆಚರಣೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
ನಾನು ಬೆಳಿಗ್ಗೆ ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಮ್ಮ ಶಾಸಕ ಗೋಪಾಲಯ್ಯನವರ ನೇತೃತ್ವದಲ್ಲಿ ಪೂಜೆ, ಪುನಸ್ಕಾರದಲ್ಲಿ ಭಾಗವಹಿಸಿದ್ದೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜನರೆಲ್ಲರೂ ಸಂಭ್ರಮದಿಂದ ವೀಕ್ಷಿಸಿದ್ದಾರೆ. ಮೋದಿಜೀ ಅವರ ಅಪೇಕ್ಷೆಯಂತೆ ಸಂಜೆ ಉತ್ತರಾಭಿಮುಖವಾಗಿ 5 ದೀಪಗಳನ್ನು ಪ್ರಜ್ವಲಿಸುವ ಮೂಲಕ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡಿದ್ದಾರೆ ಎಂದು ನುಡಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪಿ.ರಾಜೀವ್, ಪ್ರೀತಂಗೌಡ, ರಾಮಮಂದಿರ ದರ್ಶನ ಅಭಿಯಾನದ ಸಹ ಸಂಚಾಲಕ ಜಗದೀಶ್ ಹಿರೇಮನಿ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಕಾರ್ಯಾಲಯದಲ್ಲಿ ನಡೆದ ‘ಅಯೋಧ್ಯಾ ದೀಪಾವಳಿ’ಯಲ್ಲಿ ಭಾಗವಹಿಸಿದ್ದರು.
Ayodhya Temple: ಅಯೋಧ್ಯೆ ರಾಮನಲ್ಲಿ ಕ್ಷಮೆಯಾಚಿಸುತ್ತೇನೆ: ಪ್ರಾಣ ಪ್ರತಿಷ್ಠಾ ಬಳಿಕ ಪ್ರಧಾನಿ ಮೋದಿ ಹೇಳಿಕೆ
‘ಭಾರತೀಯ ಮುಸ್ಲಿಮರನ್ನ ಪ್ರಚೋದಿಸುವ ಪ್ರಯತ್ನ’ : ರಾಮ ಮಂದಿರ ನಿರ್ಮಾಣಕ್ಕೆ ‘ಪಾಕ್’ ಖಂಡನೆ, ‘ಭಾರತ’ ತರಾಟೆ