ಅಯೋಧ್ಯೆ : ದೇಶದ ಐತಿಹಾಸಿಕ ಹೆಗ್ಗುರುತುಗಳಲ್ಲಿ ಒಂದಾದ ಭವ್ಯ ರಾಮಮಂದಿರದ ಕನಸು ಇಂದು ಸಾಕಾರಗೊಂಡಿದೆ. ಪ್ರಧಾನಿ ಮೋದಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದು, ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ರಾಮನ ಪ್ರಾಣ ಪ್ರತಿಷ್ಠಾಪನೆಯ ನಂತ್ರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘”ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಆರಂಭವಾಗುತ್ತದೆ. ಶತಮಾನಗಳ ಕಾಯುವಿಕೆ, ತಾಳ್ಮೆ ಮತ್ತು ತ್ಯಾಗದ ನಂತರ ರಾಮ ಇಂದು ಬಂದಿದ್ದಾನೆ” ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ನಮ್ಮ ರಾಮ್ ಲಲ್ಲಾ ಇನ್ನು ಮುಂದೆ ಟೆಂಟ್ನಲ್ಲಿ ವಾಸಿಸುವುದಿಲ್ಲ” ಎಂದು ಹೇಳಿದರು.
ಭವ್ಯವಾದ ರಾಮ ಜನ್ಮಭೂಮಿ ದೇವಾಲಯದ ನಿರ್ಮಾಣದಲ್ಲಿ ಗಮನಾರ್ಹ ವಿಳಂಬಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭಗವಂತ ರಾಮನ ಕ್ಷಮೆಯಾಚಿಸಿದ್ದಾರೆ.
ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಗಣ್ಯರು ಮತ್ತು ವಿವಿಐಪಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಇಂದು, ನಾನು ಭಗವಂತ ಶ್ರೀರಾಮನಲ್ಲಿ ಕ್ಷಮೆಯಾಚಿಸುತ್ತೇನೆ. ನಮ್ಮ ಪ್ರಯತ್ನ, ತ್ಯಾಗ ಮತ್ತು ತಪಸ್ಸಿನಲ್ಲಿ ಏನೋ ಕೊರತೆ ಇರಬೇಕು, ನಾವು ಈ ಕೆಲಸವನ್ನ ಅನೇಕ ಶತಮಾನಗಳಿಂದ ಮಾಡಲು ಸಾಧ್ಯವಾಗಲಿಲ್ಲ. ಇಂದು ಕಾಮಗಾರಿ ಪೂರ್ಣಗೊಂಡಿದೆ. ಭಗವಂತ ಶ್ರೀರಾಮ ಇಂದು ಖಂಡಿತವಾಗಿಯೂ ನಮ್ಮನ್ನು ಕ್ಷಮಿಸುತ್ತಾನೆ ಎಂದು ನಾನು ನಂಬುತ್ತೇನೆ…” ಎಂದರು.
ಭಗವಂತ ರಾಮನ ಅಸ್ತಿತ್ವದ ಬಗ್ಗೆ ದೀರ್ಘಕಾಲದ ಕಾನೂನು ಹೋರಾಟವನ್ನ ಪರಿಹರಿಸುವಲ್ಲಿ ಭಾರತೀಯ ನ್ಯಾಯಾಂಗದ ಪಾತ್ರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆಯ ಕ್ಷಣದಲ್ಲಿ ಧನ್ಯವಾದ ಅರ್ಪಿಸಿದರು. ನ್ಯಾಯಾಂಗದ ನಿಷ್ಪಕ್ಷಪಾತ ಮತ್ತು ನ್ಯಾಯದ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಭಗವಾನ್ ರಾಮನ ಅಸ್ತಿತ್ವದ ಬಗ್ಗೆ ಕಾನೂನು ಹೋರಾಟವು ದಶಕಗಳಿಂದ ನಡೆಯಿತು. ನ್ಯಾಯ ಒದಗಿಸಿದ್ದಕ್ಕಾಗಿ ನಾನು ಭಾರತದ ನ್ಯಾಯಾಂಗಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ” ಎಂದರು.
ಅಂದ್ಹಾಗೆ, ಮಹತ್ವದ ಧಾರ್ಮಿಕ ವಿಧಾನವಾದ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಅಧಿಕೃತವಾಗಿ ರಾಮಮಂದಿರ ಉದ್ಘಾಟನೆಯಾಗಿದೆ. ಮಧ್ಯಾಹ್ನ 12:29:03ಕ್ಕೆ ಆರಂಭವಾದ ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಧಾರ್ಮಿಕ ವಿದ್ವಾಂಸರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಪ್ರಧಾನಿ ಮೋದಿ ಅವರು ಶ್ರೀ ರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಿದರು. ಈ ಮೂಲಕ ಬಾಲ ರಾಮ 500 ವರ್ಷಗಳ ಬಳಿಕ ತನ್ನ ಮೂಲ ಜಾಗವನ್ನು ಸೇರಿದಂತಾಗಿದೆ.