ಬೆಂಗಳೂರು: ಹೈಕೋರ್ಟ್ ಕಲಾಪದಲ್ಲಿ ಪ್ರಭಾಕರ್ ಭಟ್ ದ್ವೇಷ ಭಾಷಣ ವಿಡಿಯೋ ಪ್ರದರ್ಶನಕ್ಕೆ ಅವಕಾಶ ಕೊಡಿ ವಕೀಲರಾದ ಎಸ್ ಬಾಲನ್ ಅವರು ನ್ಯಾಯಪೀಠದ ಮುಂದೆ ಮನವಿ ಮಾಡಿದರು. ಇದಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಭಾಷಣವನ್ನು ಪೂರ್ತಿ ಬರಹ ರೂಪದಲ್ಲಿ ಹೈಕೋರ್ಟ್ ಸಲ್ಲಿಸಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದ್ದಾರೆ ಅಂತ ತಿಳಿದು ಬಂದಿದೆ.
ಎಫ್ಐಆರ್ ರದ್ದುಗೊಳಿಸಬೇಕು ಮತ್ತು ವಿಚಾರಣೆಗೆ ತಡೆ ನೀಡಬೇಕು ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು. ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಂ ಅವರು ವಾದ ಮಂಡಿಸಿದರು. “ಎಫ್ಐಆರ್ ನಲ್ಲಿ ಸೆಕ್ಷನ್ ಗಳನ್ನು ಹಾಕಲೆಂದೇ ಭಾಷಣದ ಮಧ್ಯದಿಂದ ಪದಗಳನ್ನು ಹೆಕ್ಕಿ ತೆಗೆಯಲಾಗಿದೆ. ದೂರುದಾರರು ರಾಜಕೀಯ ಕಾರ್ಯಕರ್ತೆಯಾಗಿದ್ದಾರೆ. ಭಾಷಣದ ಕೆಲ ಪದಗಳನ್ನು ಹೆಕ್ಕಿ ತೆಗೆದು ಅದಕ್ಕೆ ಅಪರಾಧದ ಬಣ್ಣ ನೀಡಲಾಗಿದೆ. ಈ ಹಿಂದೆ ಸರ್ಕಾರವೇ ಹೈಕೋರ್ಟ್ ನಲ್ಲಿ ಪ್ರಭಾಕರ ಭಟ್ ಬಂಧನ ಮಾಡಲ್ಲ ಎಂದು ಹೇಳಿದೆ. ಅದರ ಅರ್ಥ, ಪೊಲೀಸರು ರಾಜಕೀಯ ಒತ್ತಡದಿಂದ ಪ್ರಕರಣ ದಾಖಲಿಸಿದ್ದಾರೆ ಎಂಬುದು ಸರ್ಕಾರಕ್ಕೆ ಮನವರಿಕೆ ಆಗಿದೆ. ಸುಳ್ಳು ದೂರನ್ನು ಉದ್ದೇಶಪೂರ್ವಕವಾಗಿ ದಾಖಲಿಸಿದ್ದಾರೆ. ಹಾಗಾಗಿ ತಕ್ಷಣಕ್ಕೆ ತಡೆಯಾಜ್ಞೆ ನೀಡಬೇಕು” ಎಂದು ಕೋರಿಕೊಂಡರು. ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎಸ್ ಬಾಲನ್ “ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಅಬಿಚ್ಯುವಲ್ ಅಫೆಂಡರ್ ಆಗಿದ್ದಾನೆ. ರಾಜ್ಯಾದ್ಯಂತ ದ್ವೇಷ ಭಾಷಣ ಮಾಡುತ್ತಾ ಕೋಮುಗಲಭೆ ಸೃಷ್ಟಿಸಿ ಹಿಂಸಾಚಾರಗಳನ್ನು ಮಾಡಿದ ಇತಿಹಾಸ ಇದೆ. ಈವರೆಗೆ ಈತನ ವಿರುದ್ದ ದಾಖಲಾದ ದೂರುಗಳನ್ನು ಪೀಠ ತರಿಸಿಕೊಳ್ಳಬೇಕು. ಮುಸ್ಲೀಮರಿಗೆ ದಿನಕ್ಕೊಬ್ಬ ಗಂಡ ಎಂದು ಆರೋಪಿ ಹೇಳಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ. ಹಾಗಾಗಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ಬೀದಿಗಿಳಿದು ಪ್ರತಿಭಟನೆ ನಡೆಸಿದೆ. ಸುಪ್ರಿಂ ಕೋರ್ಟ್ ತೀರ್ಪುಗಳು, ಕಾನೂನುಗಳು ಈ ರೀತಿಯ ದ್ವೇಷ ಭಾಷಣಕ್ಕೆ ಅವಕಾಶ ಕೊಡುವುದಿಲ್ಲ. ಆರೋಪಿ ಪರ ವಕೀಲರು ಭಾಷಣವನ್ನು ಬರಹ ರೂಪದಲ್ಲಿ ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಆ ಕೆಲಸವನ್ನು ಸರ್ಕಾರ ಮಾಡಬೇಕೇ ಹೊರತು ಆರೋಪಿ ಪರ ವಕೀಲರಲ್ಲ. ಸರ್ಕಾರಕ್ಕೆ ಈ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕು. ಅದಲ್ಲದೇ, ಆರೋಪಿಯ ಪೂರ್ತಿ ಭಾಷಣವನ್ನು ಕಲಾಪದಲ್ಲಿ ಕೇಳಲು ಕೋರ್ಟ್ ನಲ್ಲಿ ವಿಡಿಯೋ ಪ್ರದರ್ಶನಕ್ಕೆ ಅವಕಾಶ ಕೊಡಬೇಕು. ಆರೋಪಿಯ ಪ್ರಕರಣಕ್ಕೆ ತಡೆಯಾಜ್ಞೆ ನೀಡಬಾರದು” ಎಂದು ಎಸ್ ಬಾಲನ್ ಮನವಿ ಮಾಡಿದರು.
“ತಡೆಯಾಜ್ಞೆ ಕೊಡಲು ಆಗಲ್ಲ. ಆರೋಪಿಯನ್ನು ಬಂಧಿಸುವುದಿಲ್ಲ ಎಂದು ಸರ್ಕಾರ ಈ ಹಿಂದೆ ನೀಡಿದ ಹೇಳಿಕೆಯಂತೆ ಕೋರ್ಟ್ ನೀಡಿದ ರಿಲೀಫ್ ಮುಂದಿನ ದಿನಾಂಕದವರೆಗೆ ಮುಂದುವರೆಯಲಿದೆ. ಆರೋಪಿಯ ಭಾಷಣದ ಪೂರ್ಣಪಾಠವನ್ನು ಬರಹ ರೂಪದಲ್ಲಿ ಕೋರ್ಟ್ ಗೆ ಸಲ್ಲಿಸಿ” ಎಂದು ನ್ಯಾಯಮೂರ್ತಿಗಳು ಸರ್ಕಾರಕ್ಕೆ ನಿರ್ದೇಶನ ನೀಡಿದರು.