ನವದೆಹಲಿ: ತಾವು ಕೇಂದ್ರ ಸಚಿವರಾಗುವ ವದಂತಿಗಳನ್ನು ಸಾರಾಸಗಟಾಗಿ ಅಲ್ಲಗಳೆದ ಮಾಜಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು; ಯಾವ ಕಾರಣಕ್ಕೆ ಈ ಸುದ್ದಿ ಹುಟ್ಟಿಕೊಂಡಿತು ಎನ್ನುವುದು ಈಗಲೂ ನನಗೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ ಎಂದಿದ್ದಾರೆ.
ನವದೆಹಲಿಯಲ್ಲಿ ಇಂದು ಬೆಳಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಕೇಂದ್ರದಲ್ಲಿ ನಾನು ಮಂತ್ರಿಯಾಗುತ್ತೇನೆ ಎನ್ನುವ ಸುದ್ದಿ ಯಾವ ಮೂಲಗಳಿಂದ ಅಷ್ಟು ಪ್ರಾಮುಖ್ಯತೆ ಪಡೆಯಿತೋ ಎನ್ನುವುದು ನನಗೆ ಗೊತ್ತಿಲ್ಲ. ಅದು ಎಲ್ಲಿಂದ ಬಂದಿತು, ಹುಟ್ಟಿತು ಎನ್ನವುದೂ ನನಗೆ ತಿಳಿದಿಲ್ಲ. ಮಾಧ್ಯಮಗಳ ಮೂಲಕವೇ ನನಗೆ ಆ ವಿಷಯ ಗೊತ್ತಾಯಿತು ಎಂದು ಹೇಳಿದರು.
ಚುನಾವಣೆ ಹತ್ತಿರದಲ್ಲಿ ಇದೆ. ಎರಡು ತಿಂಗಳಷ್ಟೇ ಸಮಯ ಉಳಿದಿದೆ. ಈಗ ನಾನು ಮಂತ್ರಿಯಾಗಿ ಮಾಡುವುದು ಏನಿದೆ? ಇಷ್ಟು ಅಲ್ಪ ಅವಧಿಯಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ ನಾನು ಏನು ಕೆಲಸ ಮಾಡಲು ಸಾಧ್ಯ? ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಏನನ್ನೂ ಮಾಡಲು ಸಾಧ್ಯವಿಲ್ಲ, ಅದರಿಂದ ಉಪಯೋಗವೂ ಇಲ್ಲ. ಯಾವ ಕಾರಣಕ್ಕೆ ಆ ಸುದ್ದಿ ಹುಟ್ಟಿಕೊಂಡಿತು ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸಚಿವನಾಗಬೇಕು ಎನ್ನುವ ಆಸಕ್ತಿಯೂ ನನ್ನಲ್ಲಿ ಇಲ್ಲ. ನನಗಿರುವ ಉದ್ದೇಶ ಒಂದೇ, ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕು. ಅದಷ್ಟೇ ನನ್ನ ಮುಂದಿರುವ ಎಕೈಕ ಅಜೆಂಡಾ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಪ್ರಾಣಪ್ರತಿಷ್ಠೆ ನಂತರ ಕ್ಷೇತ್ರ ಹಂಚಿಕೆ ನಿರ್ಧಾರ:
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಮುಗಿದ ಮೇಲೆ ಕ್ಷೇತ್ರ ಹಂಚಿಕೆ, ಮತ್ತಿತರೆ ಪ್ರಕ್ರಿಯೆಗಳನ್ನು ಪೂರ್ಣ ಮಾಡಲು ನಿರ್ಧರಿಸಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಮಿತ್ ಶಾ ಹಾಗೂ ಜೆಪಿ ನಡ್ಡಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಕ್ಷೇತ್ರಗಳ ಹಂಚಿಕೆಯ ಬಗ್ಗೆ ಎರಡೂ ಪಕ್ಷಗಳಲ್ಲಿ ಅತ್ಯಂತ ಸೌಹಾರ್ದ ಮನೋಭಾವನೆ ಇದೆ. ಯಾವುದೇ ಗೊಂದಲ, ಪ್ರಶ್ನೆಗಳು ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ ಎಂದರು ಅವರು.
ರಾಜ್ಯಕ್ಕೆ ಒಳ್ಳೆಯದಾಗಬೇಕು ಎನ್ನುವು ಏಕೈಕ ಉದ್ದೇಶದಿಂದ ಜೆಡಿಎಸ್ ಪಕ್ಷವು ಎನ್ ಡಿಎ ಮೈತ್ರಿಕೂಟ ಸೇರಿದೆ. ಈಗಾಗಲೇ ರಾಜ್ಯದ ಸ್ಥಿತಿಗತಿ, ಕ್ಷೇತ್ರಾವಾರು ಪರಿಸ್ಥಿತಿಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಅದ್ಯಕ್ಷರ ಬಳಿ ಸಮೀಕ್ಷಾ ವರದಿಗಳಿವೆ. ಅದೇ ರೀತಿ ನಾವೂ ಇದೇ ರೀತಿಯ ವರದಿಗಳನ್ನು ಸಿದ್ಧ ಮಾಡಿದ್ದೇವೆ. ಎರಡೂ ಕಡೆಯ ಮಾಹಿತಿಗಳು, ವರದಿಗಳ ಬಗ್ಗೆಯೂ ಸುದೀರ್ಘವಾಗಿ, ಮುಕ್ತವಾಗಿ ಚರ್ಚೆ ಮಾಡಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ನಮ್ಮದು ದೊಡ್ಡ ಪಕ್ಷ, ಜೆಡಿಎಸ್ ಚಿಕ್ಕ ಪಕ್ಷ ಎನ್ನುವ ಭಾವನೆ ಅಮಿತ್ ಶಾ ಮತ್ತು ನಡ್ಡಾ ಅವರಲ್ಲಿ ಇಲ್ಲ. ಅತ್ಯಂತ ಪ್ರೀತಿ, ವಿಶ್ವಾಸ, ಸ್ನೇಹಪೂರ್ವಕವಾಗಿ ಅವರು ಮಾತುಕತೆ ನಡೆಸಿದರು. ದೇವೇಗೌಡರ ಮೇಲೆ ಅವರು ಅಪಾರ ಗೌರವ ಇರಿಸಿಕೊಂಡಿದ್ದಾರೆ. ನಮ್ಮ ಹಾಗೂ ನಮ್ಮ ಪಕ್ಷದ ನಡವಳಿಕೆಗಳನ್ನು ಬಿಜೆಪಿ ಕೇಂದ್ರದ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಾವೂ ನಡೆದುಕೊಳ್ಳುತ್ತೇವೆ. ಪರಸ್ಪರ ವಿಶ್ವಾಸ, ನಂಬಿಕೆಯ ತಳಹದಿಯ ಮೇಲೆ ಈ ಮೈತ್ರಿ ಚಿರಕಾಲ ಮುಂದುವರಿಯುತ್ತದೆ ಎಂಬ ವಿಶ್ವಾಸವಚನ್ನು ಮಾಜಿ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ಗುರಿ:
ರಾಜ್ಯದಲ್ಲಿ ಮೈತ್ರಿಕೂಟವನ್ನು ಬಲಪಡಿಸಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ನನ್ನ ಗುರಿ. ಬಿಜೆಪಿ ಗುರಿಯೂ ಇದೇ ಆಗಿದೆ. ಈ ನಿಟ್ಟಿನಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಈ ನಿಟ್ಟಿನಲ್ಲಿಯೇ ನಮ್ಮ ಚರ್ಚೆ ನಡೆದಿದೆ ಎಂದು ಅವರು ಒತ್ತಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಂಸದ ಕುಪೇಂದ್ರ ರೆಡ್ಡಿ ಇತರರು ಹಾಜರಿದ್ದರು