ಬೆಂಗಳೂರು: ದೇಶದಲ್ಲಿ ನ್ಯಾಯಾಂಗವನ್ನು ದಮನ ಮಾಡಿದ ಕಾಂಗ್ರೆಸ್ ನಾಯಕರು ಈಗ ನ್ಯಾಯ ಯಾತ್ರೆ ಮಾಡುತ್ತಿರುವುದು ಢೋಂಗಿತನ. ತುರ್ತು ಪರಿಸ್ಥಿತಿ ಹೇರಿಕೆಯಿಂದ ಪ್ರಜಾಪ್ರಭುತ್ವವನ್ನು ದಮನ ಮಾಡಿದ ಇವರ ಯಾತ್ರೆಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ, ಜನವರಿ 14 ರಿಂದ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ನೇತೃತ್ವದಲ್ಲಿ ಜಯನಗರ 4 ನೇ ಹಂತದ ಗಣೇಶ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಈ ವೇಳೆ ಮಾತನಾಡಿದ ಆರ್.ಅಶೋಕ, ಕಾಂಗ್ರೆಸ್ ನಾಯಕರು ದಕ್ಷಿಣ ಭಾಗದಿಂದ ಜೋಡೋ ಯಾತ್ರೆ ಶುರು ಮಾಡಿದ್ದರು. ನಂತರ ಉತ್ತರ ಭಾಗದ ಮೂರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸೋತರು. ರಾಹುಲ್ ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡಿ ನೆಲವನ್ನು ಸ್ಪರ್ಶಿಸುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ ಅವನತಿ ಕಾಣುತ್ತದೆ. ಈಗ ನ್ಯಾಯ ಯಾತ್ರೆಯನ್ನು ಮಾಡುತ್ತಿರುವ ಅವರು ಈ ಹಿಂದೆ ಸರ್ವಾಧಿಕಾರದ ಆಡಳಿತವನ್ನು, ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ತಂದಿದ್ದರು. ನ್ಯಾಯಾಂಗವನ್ನು, ಪತ್ರಿಕಾ ರಂಗವನ್ನು ದಮನ ಮಾಡಿದ ಇದೇ ಕಾಂಗ್ರೆಸ್ ನಾಯಕರಿಗೆ ನ್ಯಾಯ ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ನಾಯಕರು ಅನೇಕ ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ನೆಹರು ಕಾಲದಿಂದ ರಾಹುಲ್ ಗಾಂಧಿಯವರೆಗೆ ರಾಮ ಮಂದಿರವನ್ನು ವಿರೋಧಿಸಿ ಭಾರತೀಯರ ಭಾವನೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಈ ನ್ಯಾಯ ಯಾತ್ರೆ ಢೋಂಗಿ ಯಾತ್ರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಾಗಿದೆ. ಪ್ರಜಾಪ್ರಭುತ್ವವನ್ನು ದಮನ ಮಾಡಿ, ಸಂಪತ್ತನ್ನು ಲೂಟಿ ಮಾಡಿದ ಇವರು ನ್ಯಾಯ ಕೇಳಲು ಹೋಗುವುದಕ್ಕೆ ಮೂರು ಕಾಸಿನ ಬೆಲೆ ಇಲ್ಲ. ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಭವಿಷ್ಯ ಕೇಳಿಬಂದಿದೆ. ಹೀಗಾಗಿ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ಸಿಗರು ಯಾತ್ರೆ ಮಾಡುತ್ತಾರೆ. ಇದರಿಂದ ಯಾವುದೇ ಲಾಭವಿಲ್ಲ. ಚುನಾವಣೆಯಲ್ಲಿ ಮೋದಿ ಗೆಲ್ಲುವುದು ಗ್ಯಾರಂಟಿ ಎಂದರು.
ರಾಮಮಂದಿರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಖಂಡಿಸುತ್ತೇವೆ. ಅವರು ತೀವ್ರವಾಗಿ ದಾಳಿ ನಡೆಸಿ ಮಾತಾಡುತ್ತಿದ್ದಾರೆ. ಅಲ್ಲಿಗೇ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಾರೆ. ತಿರುಪತಿಗೇ ಏಕೆ ಹೋಗಬೇಕು, ಧರ್ಮಸ್ಥಳಕ್ಕೇ ಏಕೆ ಹೋಗಬೇಕು, ಯಲ್ಲಮ್ಮ ದೇವಸ್ಥಾನಕ್ಕೆ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡಬಾರದು. ಇವೆಲ್ಲ ಸಿದ್ದರಾಮಯ್ಯನವರ ಸಂತೆ ಭಾಷಣ. ಮಸೀದಿಗೆ ಏಕೆ ಹೋಗಬೇಕು, ಟೋಪಿ ಏಕೆ ಹಾಕಬೇಕು, ಮನೆಯಲ್ಲೇ ಪೂಜೆ ಮಾಡಬಹುದು ಎಂದು ಕೂಡ ಪ್ರಶ್ನೆ ಮಾಡಬಾರದು. ಸಿದ್ದರಾಮಯ್ಯ ತಾವು ಕೂಡ ಹಿಂದೂ ಎನ್ನುವುದೇ ಢೋಂಗಿತನ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಪ್ರಜ್ಞೆಯೇ ಇಲ್ಲ. ಆದರೆ ಮುಸ್ಲಿಮರಿಗೆ ಅನುದಾನ ಕೊಡುತ್ತಿದ್ದಾರೆ. ಬೆಣ್ಣೆ ಹೆಚ್ಚುವ ರಾಜಕಾರಣ ಬಿಡದಿದ್ದರೆ ಬಹುಸಂಖ್ಯಾತ ಹಿಂದೂಗಳು ಸರಿಯಾದ ಸುಣ್ಣ ಹಚ್ಚುತ್ತಾರೆ ಎಂದರು.
ವಿ.ಸೋಮಣ್ಣ ಅವರದ್ದು ಏನೂ ಸಮಸ್ಯೆ ಇಲ್ಲ. ಅವರು ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಲಿದ್ದಾರೆ. ಉಳಿದಿದ್ದನ್ನು ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ ಎಂದರು.
ಸಂಸದರಾದ ಮುನಿಸ್ವಾಮಿ, ಶಾಸಕ ಕೆ.ಸಿ.ರಾಮಮೂರ್ತಿ, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹಿಂದೂ ಧರ್ಮ ನಿಮ್ಮಪ್ಪನ ಮನೆ ಆಸ್ತಿನಾ?: ಅನಂತಕುಮಾರ್ ಹೆಗಡೆಗೆ ಹಿಗ್ಗಾಮುಗ್ಗ ಬೈದ ಪ್ರದೀಪ್
‘ಏರ್ಟೆಲ್’,’ಜಿಯೊ’ 5 ಜಿ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ : ಶೀಘ್ರದಲ್ಲೇ ‘ಅನ್ಲಿಮಿಟೆಡ್ ಪ್ಲಾನ್’ ಬಂದ್