ಬೆಂಗಳೂರು: ಬಿಜೆಪಿ ಮಹಿಳಾ ಮೋರ್ಚಾ ತಂಡವು ನಾಳೆ ಹಾವೇರಿಗೆ ತೆರಳಲಿದೆ. ನಾನೂ ಅಲ್ಲಿಗೆ ತೆರಳುತ್ತೇನೆ. ಮುಂದಿನ ಹೋರಾಟವನ್ನೂ ರೂಪಿಸುತ್ತೇವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ ಅವರು ಪ್ರಕಟಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಾವೇರಿಯಲ್ಲಿ ಒಬ್ಬ ಅಲ್ಪಸಂಖ್ಯಾತ ಹೆಣ್ಮಗಳ ಮೇಲೆ ದೌರ್ಜನ್ಯ ನಡೆದಿದೆ. ಅವಳ ಪರಿಸ್ಥಿತಿ ಏನು ಎಂದು ಕೇಳಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ ಸಮೀಪದಲ್ಲೇ ಹೆಣ್ಮಗಳ ವಿವಸ್ತ್ರ ಪ್ರಕರಣ ನಡೆದಿತ್ತು. ಅದರಲ್ಲಿ ಆರೋಪಿಗಳು ಸತೀಶ್ ಜಾರಕಿಹೊಳಿ ಚೇಲಾಗಳು ಎಂಬ ಕಾರಣಕ್ಕೆ ಅವರನ್ನು ಬಂಧಿಸಿಲ್ಲ. ಈಗ ಅದರ ಕೇಸನ್ನು ಕೈಗೆತ್ತಿಕೊಳ್ಳುವಂತಾಗಿದೆ. ಕಾಂಗ್ರೆಸ್ ಸರಕಾರವು ರಾಜ್ಯದ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಟೀಕಿಸಿದರು. ಈ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸುವ ಅನಿವಾರ್ಯತೆ ಮತ್ತು ತುರ್ತು ಇದೆ ಎಂದರು. ಈ ಜವಾಬ್ದಾರಿಯನ್ನು ರಾಜ್ಯ ಮಹಿಳಾ ಮೋರ್ಚಾ ವಹಿಸಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರಗಾಲ ಇದೆ. ಹೈನುಗಾರಿಕೆ ಮಾಡುವ ರೈತ ಮಹಿಳೆಯರ ಜೀವನ ಬೀದಿಗೆ ಬಿದ್ದಿದೆ. ಇನ್ನೊಂದೆಡೆ ಶಿರಸಿಯಿಂದ ಬಂದ ಹೆಣ್ಮಗಳ ಮೇಲೆ ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಪೊಲೀಸ್ ಸ್ಟೇಷನ್‍ಗೆ ಹೋದರೆ ನ್ಯಾಯ ಸಿಗುತ್ತಿಲ್ಲ ಎಂದಾದರೆ ರಾಜ್ಯದ ಮಹಿಳೆಯರು ಸಂಕ್ರಾಂತಿ ಹಬ್ಬ ಮಾಡುತ್ತ ಕುಳಿತಿರಲು ಅಸಾಧ್ಯ ಎಂದು ಎಚ್ಚರಿಸಿದರು. ಉಡುಪಿಯಲ್ಲಿ ವಿಡಿಯೋ ವಿಚಾರ ಆದಾಗ ಸಣ್ಣ ಘಟನೆ ಎಂದು ಗೃಹ ಸಚಿವರು ತೇಲಿಸಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ?
ರಾಜ್ಯದ ವಿವಿಧ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಗೃಹ ಸಚಿವರಂತೂ ಎಲ್ಲವನ್ನೂ ತೇಲಿಸಿ ಮಾತನಾಡುತ್ತಾರೆ ಎಂದು ದೂರಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೊಬ್ಬರು ಇದ್ದಾರೆ. ಆದರೆ, ಪುರುಷರ ರಾಜಕೀಯದಲ್ಲೇ ಇವರ ಸಮಯ ಕಳೆದುಹೋಗುತ್ತಿದೆ ಎಂದು ಮಂಜುಳಾ ಅವರು ಟೀಕಿಸಿದರು. ಅವರು ಮಹಿಳೆಯರ ಪರ ಕೆಲಸ ಮಾಡುತ್ತಿಲ್ಲ. ಸಂತ್ರಸ್ತೆಯರನ್ನು ಸಂತೈಸುವ ಕಾರ್ಯವನ್ನೂ ಮಾಡುತ್ತಿಲ್ಲ ಎಂದು ದೂರಿದರು.
ಮಹಿಳಾ ಸುರಕ್ಷತೆಯನ್ನು ಲಘುವಾಗಿ ಪರಿಗಣಿಸಿದ ಮತ್ತು ಮೂಲಭೂತವಾದವನ್ನು ಪ್ರೋತ್ಸಾಹಿಸುವ ಈ ಸರಕಾರ ಕರ್ನಾಟಕಕ್ಕೆ ಬೇಕೇ ಎಂದು ಕೇಳಿದರು. ಈ ವಿಷಯದಲ್ಲಿ ಹೋರಾಟವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು.
ರಾಜ್ಯದ ಮಹಿಳೆಯರ ಪರವಾಗಿ ಮಹಿಳಾ ಮೋರ್ಚಾ ಇರುತ್ತದೆ. ಯಾವುದೇ ದೂರು- ದುಮ್ಮಾನಗಳಿದ್ದರೆ ಬಿಜೆಪಿ ಮಹಿಳಾ ಮೋರ್ಚಾವನ್ನು ಸಂಪರ್ಕಿಸಿ. ಒಂದು ವಾಟ್ಸ್ ಆ್ಯಪ್ ಮಾಡಿದರೂ ಸಾಕು ಎಂದು ಅವರು ಹೇಳಿದರು. ನಾವು ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತೇವೆ. ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಒಮ್ಮೆ ಕಾಂಗ್ರೆಸ್ ಪಕ್ಷವನ್ನು ಜನತೆ ಮನೆಯಲ್ಲಿ ಕೂರಿಸಿದ್ದರು. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ತಮ್ಮ ಚೇಲಾಗಳು, ಪುಡಾರಿಗಳ ಕೈಯಲ್ಲಿ ಕಾನೂನನ್ನು ಕೊಟ್ಟು, ಅಡ್ಡಗೋಡೆ ಮೇಲೆ ದೀಪ ಇಟ್ಟು ರಾಜಕಾರಣ ಮಾಡುತ್ತಿದೆ. ಈ ಷಡ್ಯಂತ್ರಕ್ಕೆ ಜನ ಪಾಠ ಕಲಿಸಿದ್ದರು. ಇನ್ನೂ ಅವರು ಪಾಠ ಕಲಿತಿಲ್ಲ ಎಂದು ಆಕ್ಷೇಪಿಸಿದರು. ರಾಜ್ಯ ವಕ್ತಾರರಾದ ಕು. ಸುರಭಿ ಹೊದಿಗೆರೆ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
‘ಆಸಿಡ್ ಸಂತ್ರಸ್ತ ಮಹಿಳೆ’ಯರ ಗಮನಕ್ಕೆ: ‘2.5 ಲಕ್ಷ’ದವರೆಗೆ ಸಹಾಯಧನ, ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
BREAKING: ‘KSRTC’ ದರ್ಜೆ-03 ‘ತಾಂತ್ರಿಕ ಸಹಾಯಕ ಹುದ್ದೆ’ಯ ‘ಅಂತಿಮ ಆಯ್ಕೆ ಪಟ್ಟಿ’ ಪ್ರಕಟ