ಮಂಡ್ಯ : ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆಯೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮದ್ದೂರು ಪಟ್ಟಣ ಸಮೀಪದ ಶಿಂಷಾ ನದಿ ಎಲಿವೇಟೆಡ್ ರಸ್ತೆ ( ಮೇಲು ಸೇತುವೆ ಮೇಲೆ )ಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡು ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ( ಹೋಂ ಫೈನಾನ್ಸ್ ವಿಭಾಗ ) ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಂಕರ್, ಮಹದೇವು ಹಾಗೂ ಕಿಶೋರ್ ಮೂವರು ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದ ಅವರು ಶನಿವಾರ ಬೆಳಗಿನ ಜಾವ 4.30 ರ ಸಮಯದಲ್ಲಿ ಬೊಲೆರೋ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಅವರು ಮದ್ದೂರು ಪಟ್ಟಣದ ಎಲಿವೇಟೆಡ್ ರಸ್ತೆಯಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಶಿಂಷಾ ನದಿ ಸೇತುವೆ ಮೇಲೆಯೇ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಕ್ಯಾಮೆರಾ ಕಂಬಕ್ಕೆ ಡಿಕ್ಕಿ ಹೊಡೆದು ಮೈಸೂರು ಕಡೆಗೆ ಹೋಗುವ ರಸ್ತೆಗೆ ಹೋಗಿ ಮಗುಚಿ ಬಿದ್ದಿದೆ.
ಡಿಕ್ಕಿಯ ರಭಸಕ್ಕೆ ಮ್ಯಾನೇಜರ್ ಶಂಕರ್ ಸ್ಥಳದಲ್ಲೆ ಮೃತಪಟ್ಟಿದ್ದು, ಮಹದೇವು ( ಸಾಲ ವಸೂಲಾತಿ ವಿಭಾಗದ ಮ್ಯಾನೇಜರ್ )ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಶೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಸರಣಿ ರಜೆ ಹಿನ್ನೆಲೆಯಲ್ಲಿ ದಶಪಥ ಹೆದ್ದಾರಿಯಲ್ಲಿ ಕೆಲಕಾಲ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ತಕ್ಷಣವೇ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮದ್ದೂರು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೆ.ಇ.ಮಹೇಶ್ ಹಾಗೂ ಸಿಬ್ಬಂದಿಗಳು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅದಲ್ಲದೇ ಟ್ರಾಫಿಕ್ ಜಾಮ್ ಅನ್ನು ನಿಯಂತ್ರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನು ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ದಶಪಥ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟವಾಗಿದ್ದು, ವಾಹನ ಸವಾರರು ನಿಧಾನ ಗತಿಯಲ್ಲಿ ವಾಹನ ಚಾಲನೆ ಮಾಡುವಂತೆ ಮದ್ದೂರು ಪೋಲೀಸರು ಮನವಿ ಮಾಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
‘ಆಸಿಡ್ ಸಂತ್ರಸ್ತ ಮಹಿಳೆ’ಯರ ಗಮನಕ್ಕೆ: ‘2.5 ಲಕ್ಷ’ದವರೆಗೆ ಸಹಾಯಧನ, ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
BREAKING: ‘KSRTC’ ದರ್ಜೆ-03 ‘ತಾಂತ್ರಿಕ ಸಹಾಯಕ ಹುದ್ದೆ’ಯ ‘ಅಂತಿಮ ಆಯ್ಕೆ ಪಟ್ಟಿ’ ಪ್ರಕಟ