ಶಿವಮೊಗ್ಗ: ನಾನು ಹಾಗೂ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೆವು. ಇಂದು ಆ ಐದು ಗ್ಯಾರಂಟಿಗಳನ್ನೂ ಸಮರ್ಪಿಸಿ ನಿಮ್ಮ ಮುಂದೆ ನಿಂತಿದ್ದೇವೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ, ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ ಎಂಬ ಪುರಂದರ ದಾಸರ ಕೀರ್ತನೆಯಂತೆ ಕುವೆಂಪು ಅವರ ಈ ಪವಿತ್ರವಾದ ಭೂಮಿಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿರುವುದು ನಮ್ಮ ಭಾಗ್ಯ. ನಮ್ಮ ಸರ್ಕಾರ ನುಡಿದಂತೆ ನಡೆದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಇಂದು ಯುವನಿಧಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಈ ಯೋಜನೆಗಳನ್ನು ನಿಮ್ಮ ಜೇಬು ತುಂಬಿಸಲು ಮಾತ್ರವಲ್ಲ ನಿಮಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ, ಕುಟುಂಬದ ಆತ್ಮವಿಶ್ವಾಸ ಹೆಚ್ಚಿಸಲು, ಮಾನಸಿಕವಾಗಿ ಧೈರ್ಯ ತುಂಬಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಜಾರಿಗೆ ತಂದಿದ್ದೇವೆ ಎಂದರು.
ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆತ ಕೊಟ್ಟಿರುವ ಅವಕಾಶದಲ್ಲಿ ಕೊಟ್ಟು ಹೋಗಬೇಕು, ಇಲ್ಲವೇ ಬಿಟ್ಟು ಹೋಗಬೇಕು.” ನಮ್ಮ ಸರ್ಕಾರ ನುಡಿದಂತೆ ನಡೆದು ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಯೋಜನೆ ನಿಮಗೆ ಕೇವಲ ಉದ್ಯೋಗ ನೀಡುವುದಷ್ಟೇ ಅಲ್ಲ. ಮೊಹಮದ್ ಯೂನಿಸ್ ಅವರ ಮಾತಿನಂತೆ, “ನೀನು ಒಬ್ಬರಿಗೆ ಮೀನು ಹಿಡಿದು ಕೊಟ್ಟರೆ ಅದು ಒಂದು ದಿನಕ್ಕೆ ಮಾತ್ರ ನೆರವಾಗುತ್ತದೆ. ಆದರೆ ಆತನಿಗೆ ಮೀನು ಹಿಡಿಯುವುದನ್ನು ಕಲಿಸಿದರೆ ಅದು ಅವನ ಜೀವನದುದ್ದಕ್ಕೂ ಉಪಯೋಗವಾಗುತ್ತದೆ ಎಂದು ತಿಳಿಸಿದರು.
ಕೇವಲ ಉದ್ಯೋಗ ಮಾಡುವುದಷ್ಟೇ ನಿಮ್ಮ ಆದ್ಯತೆಯಾಗಬಾರದು. ಬೇರೆಯವರಿಗೆ ಉದ್ಯೋಗ ನೀಡುವುದು ನಿಮ್ಮ ಗುರಿಯಾಗಬೇಕು. ನಿಮ್ಮ ಕೆಳಗೆ ಹತ್ತಾರು ಜನರಿಗೆ ಉದ್ಯೋಗ ಕೊಟ್ಟರೆ ಮಾತ್ರ ನಮ್ಮ ಈ ಯೋಜನೆಯ ಉದ್ದೇಶ ಸಾರ್ಥಕವಾಗಲಿದೆ ಎಂದರು.
ಗೃಹಜ್ಯೋತಿ ಯೋಜನೆ 1.50 ಕೋಟಿ ಕುಟುಂಬಗಳ ಮನೆ ಬೆಳಗುತ್ತಿವೆ. ಮನೆಯೊಡತಿಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರೂ. ತಲುಪುತ್ತಿದೆ. ಕೇಂದ್ರ ಸರ್ಕಾರ ಅಕ್ಕಿ ಪೂರೈಸದಿದ್ದರೂ ಕೊಟ್ಟ ಮಾತು ಉಳಿಸಿಕೊಳ್ಳಲು 5 ಕೆ.ಜಿ ಅಕ್ಕಿಯ ಬದಲು ಅದರ ಹಣವನ್ನು ಜನರಿಗೆ ನೀಡುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಪ್ರತಿನಿತ್ಯ 60 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ದೇವಾಲಯಗಳು ಸೇರಿದಂತೆ ಪ್ರವಾಸತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ, ವ್ಯಾಪಾರಸ್ಥರ ವಹಿವಾಟು ಹೆಚ್ಚಾಗಿದೆ ಎಂದು ಹೇಳಿದರು.
ಸಾಯಿಬಾಬ ಅವರು ನಮ್ಮಲ್ಲಿರುವ ಹಣ ಮತ್ತು ರಕ್ತ ನಿರಂತರವಾಗಿ ಚಲನೆಯಾಗುತ್ತಿರಬೇಕು ಎಂದು ಹೇಳಿದ್ದರು. ಐದು ಬೆರಳುಗಳು ಒಟ್ಟಿಗೆ ಸೇರಿ ಮುಷ್ಠಿಯಾದಂತೆ ನಮ್ಮ ಐದು ಯೋಜನೆಗಳು ಸೇರಿ ನಮ್ಮ ನಿಮ್ಮೆಲ್ಲರ ಕೈ ಗಟ್ಟಿಯಾಗಿದೆ. ಯುವಕ, ಯುವತಿಯರು ಜಾಗತಿಕ ಮಟ್ಟದಲ್ಲಿ ಆಲೋಚನೆ ಮಾಡಬೇಕು. ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯವನ್ನಾಗಿ ಮಾಡಲು ನಾವು ಶ್ರಮಿಸಿದ್ದೇವೆ ಎಂದರು.
ಇಂದು ವಿವೇಕಾನಂದ ಅವರ ಜಯಂತಿ. ಯುವಕರು ಸ್ವಾಭಿಮಾನದಿಂದ ಬದುಕಬೇಕು. ನಿಮ್ಮಿಂದ ಸಾಧ್ಯವಾಗದ ವಿಚಾರ ಯಾವುದೂ ಇಲ್ಲ. ನೀವು ಏನನ್ನು ಬೇಕಾದರೂ ಸಾಧಿಸಬಹುದು. ರಾಜೀವ್ ಗಾಂಧಿ ಅವರು ಯುವಕರಿಗೆ ಸ್ಫೂರ್ತಿ ತುಂಬಲು ಕಾರ್ಯಕ್ರಮ ರೂಪಿಸಿದ್ದರು. ಯುವಕರು ತಮ್ಮ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಈ ದೇಶಕ್ಕೆ ಶಕ್ತಿ ತುಂಬಬೇಕು. ಇದು ಕುವೆಂಪು ಅವರ ನಾಡು. ಅವರು “ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ” ಎಂದು ಹೇಳಿದ್ದಾರೆ. ನೀವು ನಿಮ್ಮ ಬದುಕಿನಲ್ಲಿ ಯಾರೇ ಟೀಕೆ ಮಾಡಿದರೂ ಚಿಂತಿಸದೇ ಮುನ್ನಡೆಯಿರಿ. ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ನಿಮ್ಮ ಬದುಕಿನಲ್ಲಿ ಜ್ಯೋತಿ ಬೆಳಗಿಸಲು ಬದ್ಧವಾಗಿದೆ ಎಂದು ತಿಳಿಸಿದರು.
“ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ.” ಹೀಗಾಗಿ ನೀವು ನಿಮ್ಮ ಬದುಕಿನಲ್ಲಿ ಆದರ್ಶ ಇಟ್ಟುಕೊಂಡು ಬದುಕಿ.
ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರು, ಮುಖಂಡರು ಭಾಗಿ
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಇದೇ ತಿಂಗಳು 21ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರು ಹಾಗೂ ಮುಖಂಡರು ಭಾಗವಹಿಸಲಿದ್ದು, ನಮ್ಮ ಎಲ್ಲಾ ಕಾರ್ಯಕರ್ತರು, ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಲೋಕಸಭೆ ಚುನಾವಣೆ ಕುರಿತ ಸಭೆ ವಿಚಾರವಾಗಿ ಕೇಳಿದಾಗ, “ನಾವು ಚರ್ಚೆ ಮಾಡಿದ್ದೇವೆ. ಅಂತಿಮವಾದ ನಂತರ ನಿಮಗೆ ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದರು.
ಹಾವೇರಿ ನೈತಿಕ ಪೊಲೀಸ್ ಗಿರಿ ತನಿಖೆಗೆ ವಿಶೇಷ ತಂಡ ರಚನೆಗೆ ಬಸವರಾಜ ಬೊಮ್ಮಾಯಿ ಆಗ್ರಹ
BREAKING: ದೇಶದ ಅತಿ ಉದ್ದದ ‘ಸಮುದ್ರ ಸೇತುವೆ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’ | Atal Setu inauguration