ಬೆಂಗಳೂರು : ಜನರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಅವರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರೇ ಇಂದು ಗ್ಯಾರಂಟಿ ಹೆಸರಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಗುರುವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಅರಿತು ಅವರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಸರ್ಕಾರ ಬಂದ ನಂತರ ಕೊಟ್ಟ ಮಾತಿನಂತೆ ಈ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದರು.
ಈ ಯೋಜನೆಗಳು ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಯೋಜನೆಗಳನ್ನು ಜಾರಿ ತರಲಾಗಿದೆ ಎಂದು ಹೇಳಿದರು.
ಸರ್ಕಾರ ಈ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 58 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಅಪಾರ್ಟ್ಮೆಂಟ್ ನಿವಾಸಿಗಳು ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿಕೊಂಡಿದ್ದಾರೆ. ಅಂದರೆ ಅಪಾರ್ಟ್ಮೆಂಟ್ ನಿವಾಸಿಗಳು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಅರ್ಥವಾಗುತ್ತದೆ ತಿಳಿಸಿದರು.
ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಬೆಂಗಳೂರಿಗೆ ಹೊಸ ಕಾಯಕಲ್ಪ ನೀಡಲು, ಸರ್ಕಾರ ಜನರ ಮನೆ ಬಾಗಿಲಿಗೆ ಬಂದು ಸ್ಥಳದಲ್ಲೇ ಜನರ ಸಮಸ್ಯೆಗೆ ಪರಿಹಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಾನು ಈ ಭಾಗದ ಜನಪ್ರತಿನಿಧಿಯಾಗಿ ನಿಮ್ಮ ಅಹವಾಲುಗಳು ಹಾಗು ಜ್ವಲಂತ ಸಮಸ್ಯೆಗಳನ್ನು ಉಪಮುಖ್ಯಮಂತ್ರಿ ಹಾಗು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಸರ್ಕಾರದ ಉದ್ದೇಶ ಸಫಲವಾಗಬೇಕಾದರೆ ಅಧಿಕಾರಿಗಳು ಶ್ರಮ ವಹಿಸಿ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಬೆಂಗಳೂರು ಸಮಸ್ಯೆಗಳ ಸಾಗರವನ್ನು ಇಟ್ಟುಕೊಂಡಿದೆ. ಟ್ರಾಫಿಕ್, ರಸ್ತೆ ಗುಂಡಿ, 110 ಹಳ್ಳಿಗಳ ಮೂಲಸೌಕರ್ಯ, ಕೆರೆಗಳ ಪುನಶ್ಚೇತನ ಸೇರಿದಂತೆ ಅನೇಕ ಸಮಸ್ಯೆ ಇದೆ. ಈ ಅಹವಾಲು ಸ್ವೀಕಾರ ನಂತರ ಉಪಮುಖ್ಯಮಂತ್ರಿ ಗಳು ಸ್ಥಳಕ್ಕೆ ಭೇಟಿ ನೀಡಿ ಕಾನೂನಾತ್ಮಕ ಪರಿಹಾರ ನೀಡಬೇಕು. ಆಗ ಜನರ ಆಶೀರ್ವಾದದಿಂದ ಬಂದಿರುವ ಸರ್ಕಾರ ಯಶಸ್ಸು ಕಾಣಲಿದೆ ಎಂದು ಹೇಳಿದರು.
ಕನಕಪುರ ರಸ್ತೆಯ ಬಳಿ ಅಪಾರ್ಟ್ಮೆಂಟ್ ಗಳು ಹೆಚ್ಚಾಗಿದ್ದು ಸಂಚಾರ ದಟ್ಟಣೆ ಹೆಚ್ಚಾಗಿದೆ. ಬೆಳಗ್ಗೆ ಹಾಗು ಸಂಜೆ ಒಂದೇ ತಾಸಿನಲ್ಲಿ 2 ಸಾವಿರ ಕಾರುಗಳು ಒಂದು ಗಂಟೆ ಅವಧಿಯಲ್ಲಿ ಈ ಅಪಾರ್ಟ್ಮೆಂಟ್ ಗಳಿಂದ ಹೊರಗೆ ಹಾಗು ಒಳಗೆ ಸಂಚಾರ ಮಾಡುತ್ತವೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಇದೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಸರಾಸರಿ 8 ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೇಗೂರು ಭಾಗದಲ್ಲಿನ ಸಂಚಾರ ದಟ್ಟಣೆಯ ಪರಿಹಾರ ನೀಡಬೇಕು ಎಂದರು.
ಹೀಗಿವೆ ಇಂದಿನ ‘ಡಿಸಿಎಂ ಡಿಕೆಶಿ’ ಜರಗನಹಳ್ಳಿಯಲ್ಲಿ ನಡೆಸಿದ ‘ಜನಸ್ಪಂದನ ಕಾರ್ಯಕ್ರಮ’ದ ಹೈಲೈಟ್ಸ್
ಕರ್ನಾಟಕದ ‘ರಾಮನ ಭಕ್ತ’ರಿಗೆ ಶಾಕ್: ‘ಬೆಂಗಳೂರು-ಅಯೋಧ್ಯೆ’ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ