ಕೊಡಗು: ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಿನಿಂದ ರಾಗಿ ಮಾಲ್ಟ್ ನೀಡಲು ಚಿಂತಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಪೊನ್ನಂಪೇಟೆ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು ಈಗಾಗಲೇ ವಾರದಲ್ಲಿ ಒಂದು ದಿನ ಮೊಟ್ಟೆ ವಿತರಿಸಲಾಗುತ್ತಿದ್ದು, ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸಲು ಮುಂದಾಗಲಾಗಿದೆ ಎಂದು ಸಚಿವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಬಗೆ ಹರಿಸಲಾಗುತ್ತಿದೆ. 13 ಸಾವಿರ ಶಿಕ್ಷಕರ ನೇಮಕಾತಿಗೆ ಅಗತ್ಯ ಕ್ರಮ ವಹಿಸಲಾಗಿದೆ. 37 ಸಾವಿರ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕೈಗೊಂಡಿದೆ. ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ ಸೇರಿದಂತೆ ಮಧ್ಯಾಹ್ನದ ಬಿಸಿ ಊಟ, ಮೊಟ್ಟೆ ಹಾಗೂ ಹಾಲು ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ತಲುಪಿಸಲಾಗುತ್ತಿದೆ ಎಂದರು.
ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಹೊರಯಾಗದಂತೆ ತಪ್ಪಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ ಶಾಲೆಗಳು ಇದ್ದು, ಈ ಶಾಲೆಗಲನ್ನು ಅಭಿವೃದ್ಧಿ ಪಡಿಸಲು ಮುಂದಾಗಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಹಳೆ ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ನೆಲದಲ್ಲಿ ಕೂರಬಾರದು. ಶಾಲೆಗಳಿಗೆ ಡೆಸ್ಕ್, ಬೆಂಚ್ ಇತರೆ ಸಾಮಾಗ್ರಿಗಳನ್ನು ವಿತರಿಸಲಾಗುವುದು ಎಂದರು. ಹೊಸ ತಾಲ್ಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇಮಕಾತಿ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳ ಕೊರತೆ ಇರುವುದರಿಂದ ನೇಮಕ ಮಾಡಿಲ್ಲ. ಮುಂದಿನ ದಿನಗಳಲ್ಲಿ ನೇಮಕಾತಿ ಮಾಡಲಾಗುವುದು ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಕುಂದುಕೊರತೆ ಸಂಬಂಧಿಸಿದಂತೆ ಅಹವಾಲು ಆಲಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಹಾಕಿ ಕ್ರೀಡೆಯು ಕೊಡಗು ಜಿಲ್ಲೆಯ ಸಂಸ್ಕøತಿಯ ಭಾಗವಾಗಿದೆ ಎಂದರು. ಪೊನ್ನಂಪೇಟೆ ಹಾಕಿ ಕ್ರೀಡಾಂಗಣಕ್ಕೆ ಇನ್ನಷ್ಟು ಮೂಲ ಸೌಲಭ್ಯ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುವುದು. ಜಿಲ್ಲೆಯ ಹಾಕಿ ಕ್ರೀಡಾ ಪಟುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಬೇಕು. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10 ಆಟದ ಮೈದಾನಗಳನ್ನು ಗುರುತಿಸಲಾಗಿದ್ದು, ಸ್ಥಳೀಯ ಕ್ರೀಡಾಪಟುಗಳು ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದರು.