ಚಿಕ್ಕಮಗಳೂರು:ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಮುಸ್ಲಿಂ ಭಯೋತ್ಪಾದಕರ ರಕ್ಷಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.ದತ್ತಪೀಠ ಹೋರಾಟಗಾರರಿಗೆ ಸಮನ್ಸ್ ಜಾರಿ ಬೆನ್ನಲೇ ಪೆಟ್ರೋಲ್ ಬಾಂಬ್ ಕೇಸ್ ಬಗ್ಗೆ ಚರ್ಚೆ ಶುರುವಾಗಿದೆ.
2017 ರಲ್ಲಿ ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬಾಂಬ್ ಪತ್ತೆಯಾದ ವಿಷಯಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಾಂಬ್ ಕೇಸ್ ಮಾಹಿತಿ ನೀಡುವಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಈ ಕೇಸಿನ ಆರೋಪಿಗಳನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಗೋರಿಗಳ ಧ್ವಂಸದ ಬಳಿಕ ಚಿಕ್ಕಮಗಳೂರು ಉದ್ವಿಗ್ನವಾಗಿತ್ತು. 2017ರ ಡಿಸೆಂಬರ್ 3ರ ರಾತ್ರಿ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಪತ್ತೆಯಾಗಿತ್ತು. ಈ ಪೆಟ್ರೋಲ್ ಬಾಂಬ್ ನೊಂದಿಗೆ ಮಾರ್ಕೆಟ್ ರಸ್ತೆಯಲ್ಲಿ ತಿರುಗುತ್ತಿದ್ದ ಯುವಕರನ್ನು ಚಿಕ್ಕಮಗಳೂರು ನಗರ ಪೋಲಿಸರು ಬಂಧಿಸಿದ್ದರು.ಈ ಪ್ರಕರಣದ ಕೇಸ್ ಫೈಲ್ ಮಾಡದಂತೆ ಅಂದಿನ ಎಸ್ಪಿಯಾಗಿದ್ದ ಅಣ್ಣಾಮಲೈಗೆ ಕಾಂಗ್ರೆಸ್ ಸರ್ಕಾರ ಒತ್ತಡ ಹಾಕಿತ್ತು ಎಂಬ ಆರೋಪಗಳಿವೆ.