ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಈ ಮೂಲಕ ಇಸ್ರೋದ ಮೊದಲ ಸೂರ್ಯ ಮಿಷನ್ ಯಶಸ್ವಿಯಾಗಿದೆ.
ಇಂದು ಇಸ್ರೋದಿಂದ ಸೂರ್ಯನ ಶಿಕಾರಿಗಾಗಿ ಹೊರಟಿದ್ದಂತ ಆದಿತ್ಯ ಎಲ್.1 ಅನ್ನು ಅಂತಿಮ ಕಕ್ಷೆಗೆ ಸೇರ್ಪಡೆ ಮಾಡೋ ಕಾರ್ಯವನ್ನು ಸಂಜೆ 4 ಗಂಟೆಗೆ ನಡೆಸಲಾಯಿತು. ಅಂದುಕೊಂಡಂತೆ ಅಂತಿಮ ಕಕ್ಷೆಗೆ ಸೇರಿಸಲಾಗಿದೆ.
ಜನವರಿ 6 ರಂದು ಸಂಜೆ 4 ಗಂಟೆಗೆ ಆದಿತ್ಯ-ಎಲ್ 1 ತನ್ನ ಎಲ್ 1 ಬಿಂದುವನ್ನು ತಲುಪಲಿದೆ ಮತ್ತು ಅದನ್ನು ಅಲ್ಲಿಯೇ ಉಳಿಸಿಕೊಳ್ಳಲು ನಾವು ಅಂತಿಮ ತಂತ್ರವನ್ನು ಮಾಡಲಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಸೋಮವಾರ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದರು.
ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪಿದ ನಂತರ, ಬಾಹ್ಯಾಕಾಶ ನೌಕೆಯು ಯಾವುದೇ ಗ್ರಹಣಗಳಿಲ್ಲದೆ ಸೂರ್ಯನನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದಿದ್ದರು.
ಅಂದರಂತೆ ಇಂದು, ಇಸ್ರೋದ ಸೂರ್ಯ ಮಿಷನ್, ‘ಆದಿತ್ಯ ಎಲ್ 1’ 37 ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿ 126 ದಿನಗಳ ಪ್ರಯಾಣದ ನಂತರ ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪಿದೆ.
2023 ರಲ್ಲಿ ಚಂದ್ರಯಾನ -3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವುದರೊಂದಿಗೆ ಅಲೆಗಳನ್ನು ಸೃಷ್ಟಿಸಿದ ನಂತರ, ಇಸ್ರೋ ತನ್ನ ಸೂರ್ಯ ಮಿಷನ್ ಯಶಸ್ವಿಯಾದಂತೆ ಆಗಿದೆ. ಈ ಮೂಲಕ ಆದಿತ್ಯ ಎಲ್ 1 ತನ್ನ ಗಮ್ಯಸ್ಥಾನವನ್ನು ತಲುಪುವ ಮೂಲಕ ಇಸ್ರೋ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ.