ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಅಂಗವಾಗಿ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಗೃಹ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಮನೋಜ್ ಪಾಂಡೆ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ರಾ ಅಧಿಕಾರಿಗಳು ಉಪಸ್ಥಿತರಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಆದಷ್ಟು ಬೇಗ ಚುನಾವಣೆ ನಡೆಸಲಾಗುವುದು ಎಂದು ಸಂಸತ್ತಿನ ಸಾಕ್ಷಿಯಾಗಿ ಕೇಂದ್ರವು ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಭರವಸೆ ನೀಡಿದೆ. 2026ರ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಭಯೋತ್ಪಾದನೆಯ ಕುರುಹು ಇರುವುದಿಲ್ಲ ಎಂದು ಅಮಿತ್ ಶಾ ಈ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಸಭೆಯಲ್ಲಿ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದರು. ಕಳೆದ ಎರಡು ತಿಂಗಳಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್‌ಪಿಎಫ್ ಮತ್ತು ಸೇನಾ ಪಡೆಗಳು ಹೆಚ್ಚು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅಮಿತ್ ಶಾ ಸಲಹೆ ನೀಡಿದರು. ಡಿಸೆಂಬರ್‌ನಲ್ಲಿ ಎರಡು ಬಾರಿ ಸೇನಾ ವಾಹನದ ಮೇಲೆ ದಾಳಿ ನಡೆದಿದೆ. ರಾಜೌರಿಯಲ್ಲಿ ಸೇನಾ ವಾಹನದ ಮೇಲೆ ನಡೆದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಈ ಘಟನೆಯನ್ನ ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ಪಾಕಿಸ್ತಾನದಿಂದ ನುಸುಳಿರುವ 30 ಉಗ್ರರಿಗಾಗಿ ಭದ್ರತಾ ಪಡೆಗಳು ಬೇಟೆ ಮುಂದುವರಿಸಿವೆ.
ಕಳೆದ ವರ್ಷ, ರಜೌರಿ, ಪೂಂಚ್ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ನಡೆದ ಸರಣಿ ಎನ್‌ಕೌಂಟರ್‌ಗಳಲ್ಲಿ 28 ಭಯೋತ್ಪಾದಕರು ಮತ್ತು 19 ಭದ್ರತಾ ಸಿಬ್ಬಂದಿ ಸೇರಿದಂತೆ 54 ಜನರು ಸಾವನ್ನಪ್ಪಿದ್ದರು. ವಿಶೇಷವಾಗಿ ರಜೌರಿಯಲ್ಲಿ 10 ಭಯೋತ್ಪಾದಕರು ಮತ್ತು 14 ಭದ್ರತಾ ಸಿಬ್ಬಂದಿ ಸೇರಿದಂತೆ 31 ಜನರು ಸಾವನ್ನಪ್ಪಿದ್ದಾರೆ. ಪೂಂಚ್‌ನಲ್ಲಿ 15 ಉಗ್ರರು ಮತ್ತು ಐವರು ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ. ರಿಯಾಸಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಚಮ್ರೆರ್ ಅರಣ್ಯದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಐವರು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು ಮತ್ತು ಓರ್ವ ಹಿರಿಯ ಅಧಿಕಾರಿ ಗಾಯಗೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ ವಿದೇಶಿ ಭಯೋತ್ಪಾದಕನೂ ಹತನಾದ. ಭಯೋತ್ಪಾದಕರ ದಾಳಿ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಭದ್ರತಾ ಸಂಸ್ಥೆಗಳಿಗೆ ಅಮಿತ್ ಶಾ ಸಲಹೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದನೆ ವಿರುದ್ಧದ ಹೋರಾಟವನ್ನ ಮುಂದುವರಿಸಲಿದೆ ಎಂದು ಗೃಹ ಸಚಿವರು ಪುನರುಚ್ಚರಿಸಿದರು.