ಬೆಂಗಳೂರು: ನಿಮ್ಮ ಸರಕಾರಕ್ಕೆ ಮತ್ತು ನಿಮಗೆ ತಾಕತ್ತಿದ್ದರೆ ರಾಜ್ಯದ ಎಲ್ಲ ರಾಮ ಕರಸೇವಕರನ್ನು ಬಂಧನ ಮಾಡಿ ನೋಡಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್ ಕುಮಾರ್ ಅವರು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇವಲ ಹುಬ್ಬಳ್ಳಿಯ ಕಾರ್ಯಕರ್ತರನ್ನು ಬಂಧಿಸುವುದಲ್ಲ. 92ರ ಕರಸೇವೆಯಲ್ಲಿ ನಾನೂ ಭಾಗವಹಿಸಿದ್ದೆ. ಕರಸೇವಕರನ್ನು ಬಂಧನ ಮಾಡುವ ಮೂಲಕ ಹಿಂದುತ್ವ ವಿಚಾರವನ್ನು ಹತ್ತಿಕ್ಕಬಹುದೆಂಬ ಯೋಚನೆಯನ್ನು ಬಿಟ್ಟು ಬಿಡಿ. ರಾಜ್ಯದ ಎಲ್ಲ ಕರಸೇವಕರ ಪಟ್ಟಿಯನ್ನು ಕೊಡುವೆ. ನಿಮ್ಮ ಸರಕಾರಕ್ಕೆ ಮತ್ತು ನಿಮಗೆ ತಾಕತ್ತಿದ್ದರೆ ಎಲ್ಲ ರಾಮಕರಸೇವಕರನ್ನು ಬಂಧನ ಮಾಡಿ ನೋಡಿ ಎಂದು ಆಗ್ರಹಿಸಿದರು.
ಇನ್ನೂ ಕಾಲ ಮಿಂಚಿಲ್ಲ; ಆಹ್ವಾನ ಕೊಟ್ಟಿಲ್ಲ; ನೋಡೋಣ ಬರೋಣ ಎಂಬ ಮಾತನ್ನು ಬಿಟ್ಟು ಬಿಡಿ. ಯಾವುದೋ ಸ್ನೇಹಿತರ, ಕುಟುಂಬಸ್ಥರ ಮದುವೆಗೆ ಆಹ್ವಾನ ಕೊಟ್ಟಿಲ್ಲ ಎಂದಾಗ ಪಿಳ್ಳೆನೆವವನ್ನು ಕೆಲವರು ಮುಂದಿಡುತ್ತಾರೆ. ರಾಷ್ಟ್ರಮಟ್ಟದ ಈ ಕಾರ್ಯಕ್ರಮಕ್ಕೆ ಯಾವ ಆಹ್ವಾನವೂ ಬೇಡ. ನಿಮಗೆ ಬದ್ಧತೆ, ಹಿಂದುತ್ವದ ಬಗ್ಗೆ ನೈಜ ಕಳಕಳಿ ಇದ್ದರೆ ಚುನಾವಣೆಯ ಹಿಂದೂ ಆಗದೆ, ನೈಜ ಹಿಂದೂ ಎಂದು ಪ್ರಕಟ ಮಾಡಬೇಕಿದ್ದರೆ 22ರಂದು ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ವಿಶೇóಷವಾದ ಪೂಜೆ ಮಾಡಿಸಲು ಸೂಚಿಸಿ. 100 ದೇವಾಲಯಗಳಿಗೆ ತಲಾ 100 ಕೋಟಿ ಅನುದಾನವನ್ನು ಮುಂದಿನ 3 ವರ್ಷಗಳಲ್ಲಿ ಕೊಡುವ ಪ್ರಯತ್ನವನ್ನು ಈ ಸರಕಾರ ಮಾಡಲಿ ಎಂದು ಒತ್ತಾಯಿಸಿದರು.
ದತ್ತಪೀಠ ಸೇರಿ ರಾಜ್ಯದ 100 ದೇವಾಲಯಗಳನ್ನು ಈ ಸರಕಾರ ಆಯ್ಕೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ, ಸಾವಿರಾರು ಕೋಟಿ ರೂಪಾಯಿಯ ಅಭಿವೃದ್ಧಿ ಕಾರ್ಯ ನಡೆದಿದೆ. ಕಾಶಿ ವಿಶ್ವನಾಥನ ಕ್ಷೇತ್ರದಲ್ಲಿ ಕಾರಿಡಾರ್ ನಿರ್ಮಾಣ ನಡೆದು ಲಕ್ಷಾಂತರ ಜನರು ಅಲ್ಲಿಗೆ ಹೋಗುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜೈನಿಯಲ್ಲಿ ದೊಡ್ಡ ಪ್ರಮಾಣದ ಮಂದಿರ ನಿರ್ಮಾಣವಾಗಿ ಅಲ್ಲಿ ಲಕ್ಷಾಂತರ ಜನ ಭಕ್ತರು ಹೋಗುತ್ತಿದ್ದಾರೆ. ಟೆಂಪಲ್ ಟೂರಿಸಂ ಮತ್ತು ಆಧ್ಯಾತ್ಮಿಕ ಭಾವನೆಗಳು ಈ ದೇಶದ ಅಡಿಗಲ್ಲು. ಆ ಹಿನ್ನೆಲೆಯಲ್ಲಿ ಕರ್ನಾಟಕದ ದೇವಸ್ಥಾನಗಳನ್ನೂ ಅಭಿವೃದ್ಧಿ ಮಾಡಿ ಎಂದು ಒತ್ತಾಯಿಸಿದರು.
ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ದೇಶದಲ್ಲಿ ಮಂಗಳಕರ ವಾತಾವರಣವಿದೆ. ಆದರೆ, ಅಪಶಕುನ ಸೃಷ್ಟಿಗೆ ಸಿದ್ದರಾಮಯ್ಯನವರು ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 32 ವರ್ಷಗಳ ಹಿಂದೆ ಕರಸೇವೆಯಲ್ಲಿ ಭಾಗವಹಿಸಿದ್ದ ಹುಬ್ಬಳ್ಳಿಯ ಕಾರ್ಯಕರ್ತರನ್ನು ಬಂಧನ ಮಾಡಿ ರಾವಣ ಮಾತ್ರ ರಾಮವಿರೋಧಿಯಲ್ಲ; ತಾನು ಕೂಡ ರಾಮವಿರೋಧಿ ಎಂಬುದನ್ನು ಕಾಂಗ್ರೆಸ್ ಸರಕಾರ ಸಿದ್ಧಗೊಳಿಸಿದೆ ಎಂದು ಟೀಕಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ದಿನಗಳು ಹತ್ತಿರ ಬರುತ್ತಿದೆ. ರಾಮಮಂದಿರದ ಮೂಲಕ ರಾಷ್ಟ್ರ ಮಂದಿರ ನಿರ್ಮಾಣಕ್ಕಾಗಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.
BREAKING: ನನ್ನನ್ನು ಸಾಯಿಸಲು ಹೊಂಚು ಹಾಕಿಸ್ತಿದ್ದಾರೆ – ವಿದ್ಯಾಧರನಾಥಶ್ರೀ ಗಂಭೀರ ಆರೋಪ
BIG NEWS: ರಾಮಜನ್ಮಭೂಮಿ ಹೋರಾಟಗಾರ ‘ಶ್ರೀಕಾಂತ್ ಪೂಜಾರಿ’ ಬಂಧನ ಪ್ರಕರಣ: ಬರೋಬ್ಬರಿ 15 ಕೇಸ್ ದಾಖಲು