ಚೆನ್ನೈ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ತಂದೆ-ಮಗನ ಕಸ್ಟಡಿಯಲ್ ಟಾರ್ಚರ್ (ಲಾಕಪ್ ಡೆತ್) ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಕೊಲೆ ಮತ್ತು ಭೀಕರ ಚಿತ್ರಹಿಂಸೆ ನೀಡಿದ ಆರೋಪದಡಿ ದೋಷಿಗಳೆಂದು ಸಾಬೀತಾದ 9 ಮಂದಿ ಪೊಲೀಸರಿಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಲಾಗಿದೆ.
2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥಾನ್‌ಕುಳಂನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಪೊಲೀಸರು ಪಿ. ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ಎಂಬುವವರನ್ನು ವಶಕ್ಕೆ ಪಡೆದಿದ್ದರು.
ಪೊಲೀಸ್ ಕಸ್ಟಡಿಯಲ್ಲಿದ್ದ ಈ ತಂದೆ-ಮಗನ ಮೇಲೆ ಪೊಲೀಸರು ಇಡೀ ರಾತ್ರಿ ಅತಿ ಕ್ರೂರವಾಗಿ ಹಲ್ಲೆ ನಡೆಸಿದ್ದರು. ಭೀಕರ ಚಿತ್ರಹಿಂಸೆಯಿಂದಾಗಿ ತಂದೆ ಮತ್ತು ಮಗ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದರು.
ಈ ಘಟನೆಯು ಭಾರತೀಯ ಪೊಲೀಸ್ ವ್ಯವಸ್ಥೆಯ ಕ್ರೂರ ಮುಖವನ್ನು ಅನಾವರಣಗೊಳಿಸಿತ್ತು. ಅಮೆರಿಕದ ‘ಜಾರ್ಜ್ ಫ್ಲಾಯ್ಡ್’ ಪ್ರಕರಣದಂತೆ ಭಾರತದಲ್ಲಿ ಇದು ಭಾರಿ ಸಂಚಲನ ಸೃಷ್ಟಿಸಿತ್ತು.
ಪ್ರಕರಣದ ಗಾಂಭೀರ್ಯ ಅರಿತ ಸರ್ಕಾರ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಪೊಲೀಸರು ಉದ್ದೇಶಪೂರ್ವಕವಾಗಿ ಮತ್ತು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು.
ಇನ್ಸ್‌ಪೆಕ್ಟರ್ ಶ್ರೀಧರ್ ಸೇರಿದಂತೆ ಒಟ್ಟು 9 ಮಂದಿ ಪೊಲೀಸ್ ಸಿಬ್ಬಂದಿಯನ್ನು ದೋಷಿಗಳೆಂದು ಪರಿಗಣಿಸಿರುವ ಮಧುರೈ ಸಿಬಿಐ ಕೋರ್ಟ್, ಇದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ (Rarest of Rare case) ಎಂದು ಹೇಳಿ ಗಲ್ಲು ಶಿಕ್ಷೆ ಘೋಷಿಸಿದೆ.








