ಬೆಂಗಳೂರು: ರಾಜ್ಯದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಕುರಿತ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ಶನಿವಾರ ನಡೆಸಿತು.
ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿ ನಗರಗಳ ಒಟ್ಟು 21 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಅರ್ಜಿ ಸಲ್ಲಿಸಿದ್ದ 10,069 ಮಂದಿ ಪೈಕಿ 8,408 (ಶೇ.83.5%) ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಬ್ಲೂಟೂತ್ ಇತ್ಯಾದಿ ಡಿಜಿಟಲ್ ಸಾಧನಗಳು ಕಾರ್ಯನಿರ್ವಹಿಸದಂತೆ ಪರೀಕ್ಷಾ ಕೇಂದ್ರಗಳ ಸುತ್ತ ಜಾಮರ್ ಅಳವಡಿಸಲಾಗಿತ್ತು. ಇಡೀ ಪ್ರಕ್ರಿಯೆಯನ್ನು ಕೆಇಎ ಕಚೇರಿಯಲ್ಲಿನ ಕಮಾಂಡ್ ಸೆಂಟರ್ ಮೂಲಕ ನಿರ್ವಹಿಸಲಾಯಿತು. ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳ ಮೂಲಕ ಕಟ್ಟುನಿಟ್ಟಿನ ನಿಗಾ ವಹಿಸಿದ್ದನ್ನು ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಂ, ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಕಲಾ ಖುದ್ದು ವೀಕ್ಷಿಸಿದರು ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ಪ್ರತಿ ಪರೀಕ್ಷಾ ಕೇಂದ್ರಕ್ಕೂ ಒಬ್ಬ ಜಿಲ್ಲಾ ನ್ಯಾಯಾಧೀಶರನ್ನು ಉಸ್ತುವಾರಿಗಳಾಗಿ ನಿಯೋಜಿಸಲಾಗಿತ್ತು. ನ್ಯಾಯಾಂಗ ಇಲಾಖೆಯ ಸಹಕಾರದಿಂದ ಪರೀಕ್ಷೆಯನ್ನು ನಡೆಸಲಾಯಿತು ಎಂದು ಅವರು ತಿಳಿಸಿದರು.
ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರೂ ಖುದ್ದು ಮೇಲ್ವಿಚಾರಣೆ ನಡೆಸಿದರು.
‘ಹಾಸನಾಂಬೆ ದೇವಿ ದರ್ಶನ’ಕ್ಕೆ ಹರಿದು ಬಂದ ಭಕ್ತ ಸಾಗರ: ಇಂದಿನವರೆಗೆ 1.2 ಲಕ್ಷ ಭಕ್ತರು ಭೇಟಿ
‘ACF, RFO, DRF ನೇಮಕಾತಿ’ಗೆ ‘ಬಿಎಸ್ಸಿ ಅರಣ್ಯಶಾಸ್ತ್ರ ಪದವಿ’ ಕಡ್ಡಾಯಗೊಳಿಸಿ: ವಿದ್ಯಾರ್ಥಿಗಳ ಒತ್ತಾಯ