78ನೇ ಸ್ವಾತಂತ್ರ್ಯಮಹೋತ್ಸವ ಹಿನ್ನಲೆಯಲ್ಲಿ ಆ.13 ರಿಂದ 15 ವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೂರು ದಿನಗಳ ಕಾಲ ಜಿಲ್ಲೆಯ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಹರ್ ಘರ್ ತಿರಂಗಾ ಅಬಿಯಾನ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತದ ತ್ರಿವರ್ಣ ಧ್ವಜ ನಮ್ಮೆಲ್ಲರ ಅಸ್ಮಿತೆಯ ಪ್ರತೀಕ. ಇದಕ್ಕೆ ಚ್ಯುತಿ ಬಾರದ ಹಾಗೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ, ಅದರ ಸೆಲ್ಫೀ ಫೋಟೋವನ್ನು ವೆಬ್ಸೈಟ್ hargartiranga.com ನಲ್ಲಿ ಅಪ್ಲೋಡ್ ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಆಗಸ್ಟ್ 13 ರಿಂದ 15 ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ನ್ಯಾಯಬೆಲೆ ಅಂಗಡಿ, ಸಂಘ-ಸಂಸ್ಥೆಗಳು, ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಬಾವುಟಕ್ಕೆ ಅಗೌರವ ತೋರಬಾರದು. ಕಡ್ಡಾಯವಾಗಿ ಧ್ವಜ ಸಂಹಿತೆಯನ್ನು ಪಾಲಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕು. ಧ್ಜಜ ಸಂಹಿತೆಯಂತೆ ಪ್ರತಿದಿನ ಸಂಜೆ ಸೂರ್ಯಾಸ್ತದ ಮೊದಲು ಧ್ವಜವನ್ನು ಇಳಿಸಬೇಕು. ಈ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.