ಬೆಂಗಳೂರು : ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಇಂಜಿನಿಯರಿಂಗ್, ಐಟಿಐ ಸೇರಿದಂತೆ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಮೇಳದಲ್ಲಿ ಒಂದು ಲಕ್ಷ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಸೋಮವಾರದಿಂದ ಆರಂಭವಾಗಿರುವ ಯುವ ಸಮೃದ್ಧಿ ಬೃಹತ್ ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರಿಗೆ ಸ್ಥಳದಲ್ಲೇ ಉದ್ಯೋಗ ಕೊಡಬೇಕೆಂಬುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಲ್ಲೊಂದಾಗಿತ್ತು. ಹೀಗಾಗಿಯೇ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಕರು ಮತ್ತು ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗ ನೀಡುವ ಯುವ ಜನ ಸಮೃದ್ಧಿ ಸಮ್ಮೇಳನ ಕರ್ನಾಟಕದ ಮಟ್ಟಿಗೆ ಒಂಚು ಚಾರಿತ್ರಿಕ ದಾಖಲೆಯಾಗಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
75 ಸಾವಿರ ಮಂದಿ ನೋಂದಾಣಿಯಾಗಿರುವುದು ದೇಶದಲ್ಲೇ ಐತಿಹಾಸಿಕ ದಾಖಲೆ. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರದವರೆಗೂ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವವರು ಮೇಳದಲ್ಲಿ ಭಾಗವಹಿಸಿದ್ದಾರೆ. ಒಂದು ಲಕ್ಷ ಉದ್ಯೋಗಗಳ ನೇಮಕಾತಿಗೆ ಖಾಸಗಿ ಕಂಪನಿಗಳು ಮುಂದೆ ಬಂದಿವೆ. ಇದು ದಾಖಲೆಯೇ ಸರಿ ಎಂದು ಪಾಟೀಲ್ ಪ್ರಶಂಸಿದರು.
ಪಂಚಖಾತ್ರಿಗಳಲ್ಲಿ ಒಂದಾಗಿರುವ ಯುವನಿಧಿ ಕಾರ್ಯಕ್ರಮ ಯುವ ಸಮುದಾಯದ ಬೆನ್ನಲೆಬುಗಿದೆ. 1.40 ಲಕ್ಷ ಪದವೀಧರರು ಹಾಗೂ ಡಿಪ್ಲೋಮೊದಾರರ ಬ್ಯಾಂಕ್ ಖಾತೆಗಳಿಗೆ ಯುವನಿಧಿ ಹಣ ಸಂದಾಯವಾಗುತ್ತಿದೆ. ಸರ್ಕಾರ ಯುವ ಸಮುದಾಯದ ಜೊತೆಗಿರಲಿದೆ ಎಂದು ಭರವಸೆ ನೀಡಿದರು.
ಯುವನಿಧಿ ಅಡಿ ನೋಂದಣಿಯಾಗಿರುವವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಇಂದು ನೆಪಮಾತ್ರಕ್ಕೆ ಉದ್ಯೋಗ ಮೇಳ ನಡೆಯುತ್ತಿಲ್ಲ. ಎಲ್ಲರಿಗೂ ಉದ್ಯೋಗ ಕೊಡಿಸಲಾಗುತ್ತಿದೆ. ಉದ್ಯೋಗ ಸಿಗದೆ ಇದ್ದ ನೋಂದಾಯಿತರ ದತ್ತಾಂಶಗಳ ಮೇಲೆ ನಿಗಾ ಇಡಲಾಗುವುದು. ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ತರಬೇತಿ ಹಾಗೂ ಕೌಶಲ್ಯ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು. ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಮಾದರಿಯಾಗಿ ನಿರುದ್ಯೋಗ ನಿವಾರಣೆಗೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪಾಟೀಲ್ ಭರವಸೆ ನೀಡಿದರು.
ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದ್ದು, ಯುವಕರ ಸಮಸ್ಯೆಗಳಿಗೆ ಸರ್ಕಾರದ ಯಂತ್ರ ಸ್ಪಂದಿಸಲಿದೆ. ಬಜೆಟ್‍ನಲ್ಲಿ ಶಿಕ್ಷಣಕ್ಕಿಂತಲೂ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ನೀಡಲಾಗಿತ್ತು. ಮುಖ್ಯಮಂತ್ರಿಯವರು ಅದಕ್ಕೆ ಸ್ಪಂದಿಸಿದ್ದಾರೆ. ಭವಿಷ್ಯದಲ್ಲಿ ಯುವಜನರ ಸಮಗ್ರ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು, ನೂರಾರು ಉದ್ಯಮಿಗಳು, ಸುಮಾರು 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಯುವ ಸಮೃದ್ಧಿ ಲಾಂಛನವನ್ನು ಅನಾವರಣಗೊಳಿಸಲಾಯಿತು.