ಮಾರ್ಚ್ ತಿಂಗಳು ಆರಂಭವಾಗಿದೆ ಮತ್ತು ನಿಮ್ಮ ಉಳಿತಾಯ ಮತ್ತು ವೆಚ್ಚಗಳಲ್ಲಿ ನೇರವಾಗಿ ಪಾತ್ರವಹಿಸುವ ಮತ್ತು ನಿಮ್ಮ ಮಾಸಿಕ ಬಜೆಟ್ ಮೇಲೆ ಪರಿಣಾಮ ಬೀರುವ ಹಲವಾರು ಬದಲಾವಣೆಗಳು ಜಾರಿಗೆ ಬರಲಿವೆ.
ಸುಡುವ ಬೇಸಿಗೆಯ ಆರಂಭದೊಂದಿಗೆ, ನೀವು ರೈಲ್ವೆ ಟಿಕೆಟ್ ಬುಕ್ ಮಾಡಲು ಅಥವಾ ಹಣಕಾಸಿನ ವಹಿವಾಟು ನಡೆಸಲು ಯೋಜಿಸುತ್ತಿದ್ದರೆ, ಈ ಹೊಸ ಬದಲಾವಣೆಗಳನ್ನು ಗಮನಿಸುವುದು ಅತ್ಯಗತ್ಯ. ಯುಪಿಐ ಪಾವತಿ, ಸೋಶಿಯಲ್ ಮೀಡಿಯಾ ಬಳಕೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ.
ಮಾರ್ಚ್ ತಿಂಗಳಲ್ಲಿ ಜಾರಿಗೆ ಬರುವ ಬದಲಾವಣೆಗಳ ಪಟ್ಟಿ ಇಲ್ಲಿದೆ:
1. ಎಲ್‌ಪಿಜಿ (LPG) ಸಿಲಿಂಡರ್ ಬೆಲೆ:
ಹೋಳಿ ಹಬ್ಬದ ಮುನ್ನವೇ ತೈಲ ಕಂಪನಿಗಳು (OMCs) ಸಿಹಿ ಸುದ್ದಿ ನೀಡಿವೆ. ಮಾರ್ಚ್ 2026 ರ ಅವಧಿಗೆ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮೆಟ್ರೋ ನಗರಗಳಲ್ಲಿ ₹28 ರಿಂದ ₹31 ರವರೆಗೆ ಕಡಿತಗೊಳಿಸಲಾಗಿದೆ. ಆದರೆ, ಮನೆಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
2. ವಿಮಾನ ಇಂಧನ (ATF) ದರ ಏರಿಕೆ:
ಮತ್ತೊಂದೆಡೆ, ವಿಮಾನಯಾನ ಸಂಸ್ಥೆಗಳಿಗೆ ಇಂಧನ ದರ ಏರಿಕೆಯ ಬಿಸಿ ತಟ್ಟಿದೆ. ಮಾರ್ಚ್ 1 ರಿಂದ ಜಾರಿಗೆ ಬರುವಂತೆ ಏರ್ ಟರ್ಬೈನ್ ಫ್ಯೂಯೆಲ್ (ATF) ಬೆಲೆಯನ್ನು ಪ್ರತಿ ಕಿಲೋ ಲೀಟರ್‌ಗೆ ₹4,977.24 ರಿಂದ ₹5,498.50 ರಷ್ಟು ಹೆಚ್ಚಿಸಲಾಗಿದೆ. ಇದು ಮುಂಬರುವ ದಿನಗಳಲ್ಲಿ ವಿಮಾನ ಟಿಕೆಟ್ ದರಗಳ ಏರಿಕೆಗೆ ಕಾರಣವಾಗಬಹುದು.
3. ಸಿಎನ್‌ಜಿ, ಪಿಎನ್‌ಜಿ, ಪೆಟ್ರೋಲ್ ಮತ್ತು ಡೀಸೆಲ್:
ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಿಗೆ ಅನುಗುಣವಾಗಿ ಇವು ಮುಂದಿನ ದಿನಗಳಲ್ಲಿ ಬದಲಾಗಬಹುದು. ಕಳೆದ ತಿಂಗಳು ಅದಾನಿ ಟೋಟಲ್ ಗ್ಯಾಸ್ ಮತ್ತು ಟೊರೆಂಟ್ ಗ್ಯಾಸ್ ಸಂಸ್ಥೆಗಳು ತಮ್ಮ ದರಗಳನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸಿದ್ದವು.
4. ಯುಪಿಐ (UPI) ಪಾವತಿ ವ್ಯವಸ್ಥೆ:
ಮಾರ್ಚ್ 1 ರಿಂದ ನಿಮ್ಮ ಯುಪಿಐ ಪಾವತಿ ವಿಧಾನ ಬದಲಾಗಬಹುದು. ಹೆಚ್ಚಿನ ಮೊತ್ತದ ವಹಿವಾಟು ನಡೆಸುವಾಗ ಕೇವಲ ಯುಪಿಐ ಪಿನ್ (PIN) ಸಾಕಾಗುವುದಿಲ್ಲ; ಬ್ಯಾಂಕುಗಳು ಇನ್ಮುಂದೆ ಬಯೋಮೆಟ್ರಿಕ್ ಅಥವಾ ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ ಅನ್ನು ಕಡ್ಡಾಯಗೊಳಿಸಿವೆ.
5. ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ (Minimum Balance):
ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳು (PSBs) ತಮ್ಮ ಕನಿಷ್ಠ ಬ್ಯಾಲೆನ್ಸ್ ನಿಯಮಗಳಲ್ಲಿ ಬದಲಾವಣೆ ಮಾಡಿವೆ. ವರದಿಗಳ ಪ್ರಕಾರ, ಅನೇಕ ಸಾರ್ವಜನಿಕ ಬ್ಯಾಂಕುಗಳು ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದಿದ್ದಲ್ಲಿ ವಿಧಿಸುತ್ತಿದ್ದ ದಂಡವನ್ನು ಮನ್ನಾ ಮಾಡಿವೆ. ಆದರೆ ಖಾಸಗಿ ಬ್ಯಾಂಕುಗಳಲ್ಲಿ ಈ ನಿಯಮ ಇನ್ನೂ ಜಾರಿಯಾಗಿಲ್ಲ.
6. ರೈಲ್ವೆ ಟಿಕೆಟ್ ಬುಕ್ಕಿಂಗ್ (RailOne App):
ಸಾಮಾನ್ಯ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮ ಜಾರಿಯಾಗಿದೆ. ಹಳೆಯ UTS ಆ್ಯಪ್ ಇಂದಿನಿಂದ ಸ್ಥಗಿತಗೊಳ್ಳಲಿದ್ದು, ಅದರ ಬದಲಿಗೆ ಹೊಸ ‘RailOne’ ಆ್ಯಪ್ ಬಳಕೆಗೆ ಬಂದಿದೆ.
ಸೇವೆಗಳು: ರಿಸರ್ವ್ಡ್ ಮತ್ತು ಅನ್-ರಿಸರ್ವ್ಡ್ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್, ಪಿಎನ್‌ಆರ್ (PNR) ವಿಚಾರಣೆ, ರೈಲಿನಲ್ಲಿ ಆಹಾರ ಆರ್ಡರ್ ಮತ್ತು ರೈಲ್ ಮದದ್ ಸೇವೆಗಳು ಇದರಲ್ಲಿ ಲಭ್ಯವಿವೆ.
7. ಸಿಮ್ ಬೈಂಡಿಂಗ್ ನಿಯಮ (SIM Binding Rules):
ಸೈಬರ್ ಅಪರಾಧ ಮತ್ತು ವಂಚನೆ ತಡೆಯಲು ಮಾರ್ಚ್ 1 ರಿಂದ ಹೊಸ ‘ಸಿಮ್ ಬೈಂಡಿಂಗ್’ ನಿಯಮ ಜಾರಿಗೆ ಬಂದಿದೆ.
ನಿಯಮ: ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್‌ನಂತಹ ಮೆಸೇಜಿಂಗ್ ಆ್ಯಪ್‌ಗಳು ಫೋನ್‌ನಲ್ಲಿ ಆಯಾ ನಂಬರ್‌ನ ಸಕ್ರಿಯ ಸಿಮ್ ಇದ್ದರೆ ಮಾತ್ರ ಕೆಲಸ ಮಾಡುತ್ತವೆ.
ವೆಬ್ ಲಾಗಿನ್: ನೀವು ಕಂಪ್ಯೂಟರ್‌ನಲ್ಲಿ ಈ ಆ್ಯಪ್‌ಗಳನ್ನು ಬಳಸುತ್ತಿದ್ದರೆ, ಪ್ರತಿ 6 ಗಂಟೆಗೊಮ್ಮೆ ಅದು ಆಟೋಮ್ಯಾಟಿಕ್ ಆಗಿ ಲೋಗೌಟ್ ಆಗುತ್ತದೆ. ಮತ್ತೆ ಲಾಗಿನ್ ಮಾಡಲು ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವುದು ಕಡ್ಡಾಯ. ಇದು ವಾಟ್ಸಾಪ್, ಟೆಲಿಗ್ರಾಮ್, ಸ್ನ್ಯಾಪ್‌ಚಾಟ್, ಶೇರ್‌ಚಾಟ್ ಮತ್ತು ಜೋಶ್‌ನಂತಹ ಆ್ಯಪ್‌ಗಳ ಸುರಕ್ಷತೆಗೆ ಸಹಕಾರಿ.








