ಚಾಮರಾಜನಗರ : ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಆಯೋಗಕ್ಕೆ ರಾಜ್ಯದ ವಿವಿಧ ಕಡೆಗಳಿಂದ 35,009 ಹಾಗೂ ಚಾಮರಾಜನಗರ ಜಿಲ್ಲೆಯಿಂದ 614 ಮೇಲ್ಮನವಿಗಳು ಸಲ್ಲಿಕೆಯಾಗಿವೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಕೆ. ಬದ್ರುದ್ದೀನ್ ಹಾಗೂ ಡಾ. ಹರೀಶ್ ಕುಮಾರ್ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಮಾಹಿತಿ ಆಯುಕ್ತರು ಚಾಮರಾಜನಗರ ಜಿಲ್ಲೆಯಿಂದ ಸಲ್ಲಿಕೆಯಾಗಿರುವ 614 ಮೇಲ್ಮನವಿಗಳಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯುತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ 249, ಕಂದಾಯ ಇಲಾಖೆ 105, ಕೃಷಿ ಇಲಾಖೆ 46, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 37 ಇವೆ. ಇವುಗಳ ವಿಲೇವಾರಿಗೆ ಮಾಹಿತಿ ಆಯೋಗ ಕ್ರಮವಹಿಸಿದೆ ಎಂದರು.
ನಾವು ಆಯೋಗದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಾಗ 55,400 ಮೇಲ್ಮನವಿಗಳು ನಮ್ಮ ಮುಂದಿದ್ದವು. ಅವುಗಳಲ್ಲಿ 20 ಸಾವಿರ ಮೇಲ್ಮನವಿಗಳನ್ನು ವಿಲೇವಾರಿ ಮಾಡಿದ್ದೇವೆ. ಉಳಿದ 35 ಸಾವಿರ ಮೇಲ್ಮನವಿಗಳ ವಿಲೇವಾರಿ ಮಾಡಲಾಗುತ್ತಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ಕುರಿತು ಅಧಿಕಾರಿಗಳಿಗೆ ಮತ್ತಷ್ಟು ಅರಿವು ಮೂಡಿಸಲು ಆಯೋಗವು ರಾಜ್ಯಾದ್ಯಂತ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಇಲ್ಲಿಯ ತನಕ 16 ಜಿಲ್ಲೆಗಳಲ್ಲಿ ಕಾರ್ಯಗಾರ ನಡೆಸಲಾಗಿದೆ. ಚಾಮರಾಜನಗರ ಜಿಲ್ಲೆಯು 17 ನೇಯದ್ದಾಗಿದೆ. ಕಾಯ್ದೆ ಬಗೆಗಿನ ವ್ಯಾಪಕ ಜಾಗೃತಿ, ಸಾರ್ವಜನಿಕ ಪ್ರಾಧಿಕಾರಗಳ ಹೊಣೆಗಾರಿಕೆ, ಅಧಿಕಾರಿಗಳಿಗಿರುವ ಗೊಂದಲಗಳನ್ನು ಸರಿಪಡಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ತರಲು ಹಾಗೂ ಜನರು ಪ್ರಶ್ನೆ ಮಾಡಲು ಅವಕಾಶ ನೀಡಲು 20 ವರ್ಷಗಳ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಲಾಗಿದೆ. ಕಾಯ್ದೆಯು ಉತ್ತಮವಾಗಿದ್ದು ಸಾರ್ವಜನಿಕ ಹಿತಾಸಕ್ತಿ, ಸದುದ್ದೇಶದಿಂದ ಮಾಹಿತಿ ಕೋರಿ ಅರ್ಜಿ ಸಲ್ಲಿಸಬೇಕು. ಕಾಯ್ದೆಯನ್ನು ದುರ್ಬಳಕೆ ಮಾಡಲು ಅವಕಾಶವಿಲ್ಲ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
Drinking Water: ನಿಂತು ನೀರು ಕುಡಿಯುವುದರಿಂದ ಮೊಣಕಾಲುಗಳಿಗೆ ಹಾನಿಯಾಗುತ್ತಾ? ವಿಜ್ಞಾನ ಹೇಳೋದೇನು ಓದಿ!








