ಬೆಂಗಳೂರು : ರಾಜ್ಯ ಪಠ್ಯಕ್ರಮದ 5,8 ಮತ್ತು 9ನೇ ತರಗತಿಗಳ ಮೌಲ್ಯಾಂಕನ ಮೌಲ್ಯಮಾಪನವನ್ನು ಏಪ್ರಿಲ್ 2 ರ ಒಳಗೆ ಪೂರ್ಣಗೊಳಿಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ(Summative Assessment(SA-2) ಕಾರ್ಯವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ದಿನಾಂಕ:11.03.2024 ಮತ್ತು 12.03.2024 ರಂದು ಹಾಗೂ ಉಳಿದ ವಿಷಯಗಳ ಮೌಲ್ಯಾಂಕನವನ್ನು ಉಲ್ಲೇಖ(2) ರನ್ವಯ ದಿನಾಂಕ:25.03.2024 ರಿಂದ 28.03.2024 ರವರೆಗೆ ನಡೆಸಲಾಗುತ್ತಿದೆ.
5,8 ಮತ್ತು 9ನೇ ತರಗತಿಗಳ ಮೌಲ್ಯಾಂಕನಕ್ಕೆ ನೀಡಲಾದ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದಂತೆ ವಿಷಯವಾರು ಕೀ ಉತ್ತರಗಳ ಪ್ರತಿಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಲಭ್ಯಮಾಡಲಾಗುತ್ತಿದ್ದು, ಈಗಾಗಲೇ ಉಲ್ಲೇಖ(1) ರ ಸರ್ಕಾರಿ ಆದೇಶದಲ್ಲಿ ತಿಳಿಸಿರುವಂತೆ ಮೌಲ್ಯಮಾಪನ ಕಾರ್ಯವನ್ನು ಬ್ಲಾಕ್ ಹಂತದಲ್ಲಿ ಅಂತರ್ ಕ್ಲಸ್ಟರ್‌ವಾರು ನಿರ್ವಹಿಸಬೇಕಿರುತ್ತದೆ. ಅದರಂತೆ 5ನೇ ತರಗತಿಯ ಮೌಲ್ಯಾಂಕನವು 3:26.03.2024 ರಂದು ಪೂರ್ಣಗೊಂಡಿರುವುದರಿಂದ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 80 ಉತ್ತರ ಪತ್ರಿಕೆಗಳಂತೆ ಮೌಲ್ಯಮಾಪನ ಕಾರ್ಯವನ್ನು ದಿನಾಂಕ:31.03.2024 ರೊಳಗೆ ಪೂರ್ಣಗೊಳಿಸುವುದು ಹಾಗೂ 8 ಮತ್ತು 9ನೇ ತರಗತಿಯ ಮೌಲ್ಯಾಂಕನವು ದಿನಾಂಕ:28.03.2024 ರಂದು ಪೂರ್ಣವಾಗುತ್ತಿದ್ದು, 8ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 60 ಉತ್ತರ ಪತ್ರಿಕೆಗಳನ್ನು ಹಾಗೂ 9ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 40 ಉತ್ತರ ಪತ್ರಿಕೆಗಳಂತೆ ಮೌಲ್ಯಮಾಪನವನ್ನು ದಿನಾಂಕ:02.04.2024 ರ ಒಳಗಾಗಿ ಪೂರ್ಣಗೊಳಿಸುವುದು ಹಾಗೂ ಎಲ್ಲಾ ತರಗತಿಗಳ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳನ್ನು ಶಾಲೆಗಳಿಗೆ ಮರು ರವಾನೆ ಮಾಡುವುದು.
ಮುಂದುವರೆದು, ಶಾಲಾ ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಗ್ರೇಡ್‌ಗಳಾಗಿ ಪರಿವರ್ತಿಸಿ ಎಸ್.ಎ.ಟಿ.ಎಸ್ ನಲ್ಲಿ ನಮೂದಿಸುವುದು ಹಾಗೂ ಸಮುದಾಯದತ್ತ ಶಾಲಾ ದಿನದಂದು ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ನೀಡುವುದು. ಈ ಸಂಬಂಧ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮವಹಿಸಲು ತಿಳಿಸಿದೆ.