ಮೈಸೂರು: ಕೆಲ ದಿನಗಳ ಹಿಂದೆ ಜಿಲ್ಲೆಯ ಬ್ಯಾಂಕ್ ಒಂದರಲ್ಲಿ ಇರಿಸಲಾಗಿದ್ದಂತ ಚಿನ್ನದ ತೂಕದಲ್ಲೇ ಕಡಿಮೆಯಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಬರೋಬ್ಬರಿ 56.78 ಲಕ್ಷ ಸಾಲ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್ ಇದೆ. ಈ ಬ್ಯಾಂಕಿನಲ್ಲಿ ನಕಲಿ ಚಿನ್ನಾಭರಣವನ್ನು ಗಿರವಿ ಇಟ್ಟಿರುವಂತ ವಂಚಕರು, ಬರೋಬ್ಬರಿ 56.78 ಲಕ್ಷ ರೂಪಾಯಿ ಪಡೆದು ವಂಚಿಸಿರೋದು ತಿಳಿದು ಬಂದಿದೆ.
ಬ್ಯಾಂಕ್ ಸಿಬ್ಬಂದಿ ಸುರೇಶ್ ಕಣ್ಣನ್ ಎಂಬುವರು ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ 7 ಮಂದಿ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಮೈಸೂರಿನ ಅಬ್ದುಲ್ ಜಲೀಲ್, ಮಂಡ್ಯದ ಸಾಗರ್, ಪುಟ್ಟರಾಜು, ರವಿಕುಮಾರ್, ಆತನ ಪತ್ನಿ ದಿವ್ಯಾ, ಬೆಂಗಳೂರಿನ ನಾಗರತ್ನ ರೆಡ್ಡಿ ಹಾಗೂ ಟಿ ನರಸೀಪುರದ ರವೀಂದ್ರ ಕುಮಾರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಂದಹಾಗೇ ಮರ್ಕೆಂಟೈಲ್ ಬ್ಯಾಂಕ್ ನಲ್ಲಿ ರವೀಂದ್ರ ಕುಮಾರ್ ಚಿನ್ನಾಭರಣ ಮೌಲ್ಯಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಅವರು ಆರೋಪಿಗಳೊಂದಿಗೆ ಶಾಮೀಲಾಗಿ ನಕಲಿ ಚಿನ್ನಾಭಣ ಗಿರವಿ ಇರಿಸಿದರೂ, ಅದು ಓರಿಜಿನಲ್ ಅಲ್ಲ ಎಂಬುದಾಗಿ ತಿಳಿಸದೇ, ವಂಚಕರಿಗೆ 56.78 ಲಕ್ಷ ಹಣ ನೀಡಲು ನೆರವಾಗಿದ್ದಾರೆ. 782 ಗ್ರಾಂ ನಕಲಿ ಚಿನ್ನಾಭರಣ ಇರಿಸಿ, ಈ ಕೃತ್ಯ ಎಸಗಲಾಗಿದೆ. ಆದರೇ ಜನವರಿ.26, 2026ರಂದು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದಂತ ಚಿನ್ನಾಭರಣಗಳನ್ನು ಮೌಲ್ಯ ಮಾಪನ ಮಾಡುವ ಸಂದರ್ಭದಲ್ಲಿ ಈ ನಕಲಿ ಚಿನ್ನದ ಜಾಲ ಪತ್ತೆಯಾಗಿದೆ.








