ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭಗೊಂಡ ನಂತ್ರ, ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ 53,816 ವಿದ್ಯುತ್ ಕಂಬ, 3,924 ಟ್ರಾನ್ಸ್ ಫಾರ್ಮರ್, 1,120 ಕಿ.ಮೀ ವಿದ್ಯುತ್ ತಂತಿ ಹಾನಿಗೊಂಡಿದೆ. ಈ ಮೂಲಕ ಎಸ್ಕಾಂಗಳಿಗೆ 96.66 ಕೋಟಿ ರೂ ನಷ್ಟವಾಗಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಂತ ಇಂಧನ ಸಚಿವ ಕೆಜೆ ಜಾರ್ಜ್ ಅವರು, “ಮಳೆ ಮತ್ತು ಗಾಳಿಯಿಂದ 53,816 ಕಂಬಗಳು, 3,924 ಟ್ರಾನ್ಸ್ ಫಾರ್ಮರ್ ಗಳು, 1,120 ಕಿ.ಮೀ. ವಿದ್ಯುತ್ ತಂತಿಗಳು ಹಾನಿಗದೊಳಗಾಗಿದ್ದು. ಈ ಪೈಕಿ 51,119 ಕಂಬಗಳು, 3,918 ಟ್ರಾನ್ಸ್ ಫಾರ್ಮರ್ ಗಳು, 1,063 ಕಿ.ಮೀ. ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಎಸ್ಕಾಂ ಸಿಬ್ಬಂದಿ ಸತತವಾಗಿ ಶ್ರಮಿಸುತ್ತಿದ್ದಾರೆ,” ಎಂದರು.
“ವಿದ್ಯುತ್ ಕಂಬ, ತಂತಿ, ಟ್ರಾನ್ಸ್ ಫಾರ್ಮರ್‌ಗಳ ದುರಸ್ತಿಗೆ ಮೆಸ್ಕಾಂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಾರಿ ಮಳೆ ಬೀಳುತ್ತಿರುವ ಮಲೆನಾಡು, ಕರಾವಳಿ ಮತ್ತು ಬೆಳಗಾವಿ ಭಾಗಗಳಲ್ಲಿ ನೀರಿನ ಮಧ್ಯೆಯೂ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಹೆಚ್ಚುವರಿ ಗ್ಯಾಂಗ್ ಮೆನ್ ಮತ್ತು ಲೈನ್ ಮೆನ್ ಗಳನ್ನು ನೇಮಿಸುವುದರ ಜತೆಗೆ ಗುತ್ತಿಗೆದಾರರ ನೆರವಿನೊಂದಿಗೆ ತಂಡಗಳನ್ನು ಮಾಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಮರು ಸಂಪರ್ಕಕ್ಕೆ ಕಂಬಗಳು, ಕಂಡಕ್ಟರ್ ಗಳು, ತಂತಿಗಳ ಕೊರತೆಯಾಗದಂತೆ ಮೊದಲೇ ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು. ಇದರಿಂದ ಮಳೆಯಿಂದ ಆಗಿರುವ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲಾಗುತ್ತಿದೆ,” ಎಂದು ತಿಳಿಸಿದರು.
ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಅನುಕೂಲವಾಗುವಂತೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಹಾರ ಕಾರ್ಯ ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಳೆ ಮತ್ತು ಗಾಳಿಯಿಂದ ಸದ್ಯಕ್ಕೆ ಸಾಕಷ್ಟು ಸಮಸ್ಯೆಯಾಗಿದ್ದರೂ ಜಲಾಶಯಗಳು ತುಂಬುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುತ್ತದೆ”, ಎಂದು ಹೇಳಿದರು.
ವಯನಾಡ್ ಭೂಕುಸಿತ: ಕೇರಳದಲ್ಲಿ 2 ದಿನಗಳ ಶೋಕಾಚರಣೆ ಘೋಷಣೆ | Wayanad landslide
ಶಿವಮೊಗ್ಗ: ನಾಳೆ ಸಾಗರದ ‘ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ‘ಪತ್ರಿಕಾ ದಿನಾಚರಣೆ’