ಕಲಬುರಗಿ : ಕೇಂದ್ರ ಸರ್ಕಾರದ ಅಸಹಕಾರದ ನಡುವೆ 2024-25ನೇ ಸಾಲಿಗೆ 52 ಸಾವಿರ ಕೋಟಿ ರೂ. ಹಣ ಗ್ಯಾರಂಟಿ ಯೋಜನೆಗೆ ಮೀಸಲಿಟ್ಟಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಸಹಕಾರದ ನಡುವೆ 2024-25ನೇ ಸಾಲಿಗೆ 52 ಸಾವಿರ ಕೋಟಿ ರೂ. ಹಣ ಗ್ಯಾರಂಟಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಐದು ಬೆರಳಿಗೆ ಸಮ ಎಂದ ಅವರು, ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ ಇಡೀ ದೇಶದಲ್ಲಿ ಮಾದರಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371ಜೆ ಮೀಸಲಾತಿ ಜಾರಿಗೆ ತಂದು ಇಲ್ಲಿನ ಜನರ ಕಲ್ಯಾಣಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದು, ಉಪಕಾರ ಸ್ಮರಣೆ ಮಾಡುವುದು ಇಲ್ಲಿನ ಜನರ ಕರ್ತವ್ಯ ಎಂದರು.
ಬಸವಣ್ಣನ ಕರ್ಮಭೂಮಿ ಇದು. ಶರಬಸವೇಶ್ವರ ದೇವಸ್ಥಾನ, ಖಾಜಾ ಬಂದೇ ನವಾಜ್ ದರ್ಗಾ, ಬುದ್ದ ವಿಹಾರ ಇರುವ ಸೌಹಾರ್ದ ಸ್ಥಳ ಇದಾಗಿದೆ. ದೇವನೊಬ್ಬ ನಾಮ ಹಲವು. ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದು ಜನರ ಕಲ್ಯಾಣಕ್ಕೆ ಶ್ರಮಿಸಿದ್ದೇವೆ. ಇದು ವಿರೋಧ ಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ. ಧರ್ಮದಲ್ಲಿ ರಾಜಕಾರಣ ಮಾಡಲು ಹೊರಟಿವೆ. ಧರ್ಮದಲ್ಲಿ ರಾಜಕಾರಣ ಮಾಡಬಾರದು, ರಾಜಕರಣದಲ್ಲಿ ಧರ್ಮ ಇರಬೇಕು ಎಂಬ ನಂಬಿಕೆ ಉಳ್ಳವರು ನಾವು. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ರೀತಿಯಲ್ಲಿ ಸಮಸ್ತ ವರ್ಗವನ್ನು ತೆಗೆದುಕೊಂಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
ಶಾಸಕ ಎಂ.ವೈ.ಪಾಟೀಲ ಮತ್ತು ಡಾ.ಅಜಯ್ ಸಿಂಗ್ ಅವರ ಮನವಿಗೆ ಪ್ರತಿಕ್ರಿಯೆಸಿದ ಡಿ.ಸಿ.ಎಂ. ಡಿ.ಕೆ.ಶಿವಕುಮಾರ ಅವರು, ಕಲಬುರಗಿ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಭೀಮಾ ನದಿಗೆ ನೀರು ಹರಿಸಲು ಮಹಾರಾಷ್ಟ್ರ ರಾಜ್ಯದೊಂದಿಗೆ ಸತತ ಸಂಪರ್ಕದಲ್ಲಿದ್ದು, ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವೆ ಎಂದು ಭರವಸೆ ನೀಡಿದರು.