ಚಿತ್ರದುರ್ಗ: ರಾಜ್ಯದ ಜನರೇ ಬೆಚ್ಚಿ ಬೀಳುವಂತ ಘಟನೆ ಜಿಲ್ಲೆಯಲ್ಲಿ ನಡೆದಿತ್ತು. ಅದೇ ಪಾಳು ಬಿದ್ದ ಮನೆಯಲ್ಲಿ ಒಂದೇ ಕುಟುಂಬದ ಐವರು ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದ್ದರು. ಈ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಎಫ್ಎಸ್ಎಲ್ ವರದಿಯಲ್ಲಿ ಸಾವಿನ ರಹಸ್ಯ ಬಯಲಾಗಿದೆ. ಅದು ಏನು ಅಂತ ಮುಂದೆ ಓದಿ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಗೇಟ್ ಬಳಿಯ ಪಾಳು ಬಿದ್ದ ಮನೆಯಲ್ಲಿ 2023 ಡಿಸೆಂಬರ್ 28ರಂದು ಒಂದೇ ಕುಟುಂಬದ ಐವರು ಅಸ್ತಿಪಂಜರದ ರೂಪದಲ್ಲಿ ಪತ್ತೆಯಾಗಿದ್ದರು. ಜಗನ್ನಾಥರೆಡ್ಡಿ ಕುಟುಂಬದ ಐವರ ಮೃತದೇಹ ಹಿಂದೆ ಹಲವು ಅನುಮಾನಗಳು ಕಾಡುತ್ತಿದ್ದವು. ಈಗ ಆ ಅನುಮಾನಗಳಿಗೆ ತೆರೆ ಬಿದ್ದಿದೆ. ಪೊಲೀಸರಿಗೆ ಎಫ್ಎಸ್ಎಲ್ ವರದಿಯು ಕೈ ಸೇರಿದೆ.
ಈ ಬಗ್ಗೆ ಮಾಹಿತಿ ನೀಡಿದಂತ ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಚಳ್ಳಕೆರೆ ಗೇಟ್ ಬಳಿಯ ಪಾಳುಮನೆಯಲ್ಲಿ ಸಿಕ್ಕಂತ ಒಂದೇ ಕುಟುಂಬದ ಐವರು ಅಸ್ತಿಪಂಜರಗಳನ್ನು ಎಫ್ಎಸ್ಎಲ್ ತನಿಖೆಗೆ ಕಳುಹಿಸಲಾಗಿತ್ತು. ಐವರ ಮೃತದೇಹದಲ್ಲಿ ಬಹುತೇಕ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ. ನಿದ್ದೆ ಮಾತ್ರೆ ಸೇವಿಸಿ ಸಾವನ್ನಪ್ಪಿರೋದು ಖಚಿತವಾಗಿದೆ ಎಂದಿದ್ದಾರೆ.
ನಿದ್ರೆ ಮಾತ್ರೆ ಹೊರತಾಗಿ ಮೃತದೇಹದಲ್ಲಿ ಯಾವುದೇ ಸೈನೆಡ್ ಅಂಶ ಪತ್ತೆಯಾಗಿಲ್ಲ. 2019ರಲ್ಲಿ ಐವರು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ನಿಖರವಾಗಿ ಯಾವಾಗ ಸಾವನ್ನಪ್ಪಿದ್ದಾರೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಅಂದಹಾಗೇ ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ನಿವೃತ್ತ ಎಇಇ ಜಗನಾಥ್ ರೆಡ್ಡಿ, ಪತ್ನಿ ಪ್ರೇಮ ಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ, ನರೇಂದ್ರ ರೆಡ್ಡಿ ಮೃತಪಟ್ಟಿದ್ದರು.








