ಭುವನೇಶ್ವರ್/ನಯಾಗಢ: ಒಡಿಶಾದ ನಯಾಗಢ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಪ್ರವಾಸಿ ಬಸ್ ಅಪಘಾತದಲ್ಲಿ ಐವರು ಪ್ರವಾಸಿಗರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ನಿಯಂತ್ರಣ ತಪ್ಪಿದ ಬಸ್ ರಸ್ತೆಬದಿಯ ಕಂದಕಕ್ಕೆ ಉರುಳಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ನಯಾಗಢ ಜಿಲ್ಲೆಯ ದಶಪಲ್ಲಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮತ್ತೊಬ್ಬರು ಕೊನೆಯುಸಿರೆಳೆದಿದ್ದಾರೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.ಅಪಘಾತದಲ್ಲಿ ಗಾಯಗೊಂಡ 30ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಹತ್ತು ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್ (AIIMS) ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಈ ಬಸ್ ಪಶ್ಚಿಮ ಬಂಗಾಳದಿಂದ ಒಡಿಶಾದ ಪುರಿ ಮತ್ತು ಕೊನಾರ್ಕ್ ದೇವಾಲಯಗಳ ದರ್ಶನಕ್ಕಾಗಿ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಧಾವಿಸಿದ್ದು, ಸ್ಥಳೀಯರ ಸಹಾಯದೊಂದಿಗೆ ಬಸ್ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯಲಾಗಿದೆ.








