ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಮದ್ದೂರು ನಗರದಲ್ಲಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ಮಾಡಿದರು.
ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾ.ಪಂ ಅನ್ನು ಸೇರಿಸಿರುವುದನ್ನು ವಿರೋಧಿಸಿ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ 53 ದಿನಗಳಿಂದ ಹಾಗೂ ಗೊರವನಹಳ್ಳಿ ಗ್ರಾಪಂ ಕಚೇರಿ ಎದುರು 34 ದಿನಗಳಿಂದ ಅನಿದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ನಗರದ ಶಿವಪುರ ಧ್ವಜ ಸತ್ಯಾಗ್ರಹ ಸೌಧದಿಂದ ಆರಂಭಗೊಂಡ ಪಂಜಿನ ಮೆರವಣಿಗೆಗೆ ರೈತ ನಾಯಕಿ ಸುನಂದ ಜಯರಾಮು ಚಾಲನೆ ನೀಡಿ ಮಾತನಾಡಿ, ಮದ್ದೂರು ನಗರಸಭೆಗೆ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಗ್ರಾಪಂಗಳನ್ನು ಸೇರಿಸಿರುವುದು ಸರಿಯಲ್ಲ. ಈ ಕೂಡಲೇ ಈ ಪಂಚಾಯಿತಿಗಳನ್ನು ನಗರಸಭೆಯಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ನಾಲ್ಕು ಪಂಚಾಯತಿಗಳ ಗ್ರಾಮಸ್ಥರು ಒಗ್ಗೂಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಲವು ದಿನಗಳಿಂದ 2 ಪಂಚಾಯಿತಿಗಳ ಮುಂದೆ ಪ್ರತಿಭಟನಾ ಧರಣಿ ನಡೆಯುತ್ತಿದ್ದರು ಸ್ಥಳಕ್ಕೆ ಶಾಸಕರು, ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಬಾರದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪಂಜಿನ ಮೆರವಣಿಗೆ ಸತ್ಯಾಗ್ರಹ ಸೌಧದಿಂದ ನಗರದ ಪೇಟೆ ಬೀದಿಯ ಮುಖಾಂತರ ನೂರಾರು ಮಂದಿ ನಗರಸಭೆ ವಿರೋಧಿಸಿ ಬೇಕೆ ಬೇಕು ಪಂಚಾಯಿತಿ ಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಪ್ರವಾಸಿ ಮಂದಿರ ಬಳಿ ಆಗಮಿಸಿದರು.
ಪ್ರತಿಭಟನೆಯಲ್ಲಿ ಲಿಂಗಪ್ಪಾಜಿ, ಶಂಕರ್, ರಾಧಾ, ಚಂದ್ರಶೇಖರ್, ವೀರಪ್ಪ, ಮೋಹನ್, ಜಿ.ಪಿ.ಯೋಗೇಶ್, ಶಿವಕುಮಾರ್, ಸತ್ಯಮ್ಮ, ಪ್ರಸನ್ನ, ಉಮೇಶ್, ಅವಿನಾಶ್, ಮಹೇಶ್, ಲಿಂಗಯ್ಯ ಸೇರಿದಂತೆ ಇತರರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








