ಕಲಬುರಗಿ : ರಾಜ್ಯದ 6.50 ಕೋಟಿ ಜನರಲ್ಲಿ ಅಂದಾಜು 4.80 ಕೋಟಿ ಜನರು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕದ ಜನರ ಆರ್ಥಿಕ, ಸಾಮಾಜಿಕ ಭದ್ರತೆ ಹಾಗೂ ಸ್ವಾಭಿಮಾನದ ಬದುಕು ನೀಡುವ ಉದ್ದೇಶದಿಂದ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.
– ರಾಜ್ಯದಲ್ಲಿ 1.50 ಕೋಟಿ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ
– 4.30 ಕೋಟಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
– ಶಕ್ತಿ ಯೋಜನೆಯಲ್ಲಿ ಪ್ರತಿನಿತ್ಯ 65 ಲಕ್ಷಕ್ಕೂ ಹೆಚ್ಚು ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ.
– ಯುವನಿಧಿ ಯೋಜನೆಯಡಿಯಲ್ಲಿ 1.30 ಕೋಟಿ ಯುವಕರಿಗೆ ಲಾಭವಾಗುತ್ತಿದೆ
– ರಾಜ್ಯದ 6.50 ಕೋಟಿ ಜನರಲ್ಲಿ ಅಂದಾಜು 4.80 ಕೋಟಿ ಜನರು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಗ್ಯಾರಂಟಿಗಳಿಗೆ ವಾರ್ಷಿಕವಾಗಿ ₹ 52,000 ಕೋಟಿ ಅನುದಾನ ಬಳಕೆ ಮಾಡಲಾಗುತ್ತಿದೆ. ಇಂತಹ ಜನಪರ ಯೋಜನೆಗಳನ್ನು ಬಿಜೆಪಿಗರು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಿದ್ದಾರೆ. ನಾವು ನಿಮ್ಮ ದುಡ್ಡನ್ನು ನಿಮಗೆ ವಾಪಸ್ ಕೊಡಬೇಕೆಂದು ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ರಾಜ್ಯ ಭೀಕರ ಬರಗಾಲ ಎದುರಿಸುತ್ತಿದೆ. 40 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ. ₹18,171 ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರವು ಇದುವರೆಗೂ ಅನುದಾನ ಬಿಡುಗಡೆ ಮಾಡಲಿಲ್ಲ. ಬಿಜೆಪಿಯವರು ಈ ಹಿಂದೆ ನೀಡಿದ ಭರವಸೆಯಂತೆ ಕೋಲಿ ಹಾಗೂ ಕಬ್ಬಲಿಗ ಸಮಾಜವನ್ನು ST ಗೆ ಸೇರಿಸಬೇಕಾಗಿತ್ತು. ಆದರೆ ಸಂಸದರು ಈ ವಿಚಾರದಲ್ಲಿ ಯಾವ ಪ್ರಯತ್ನವನ್ನು ಮಾಡಲಿಲ್ಲ. ಇದು ಈ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.