ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ತನ್ನ ಅತಿದೊಡ್ಡ ‘ಆರ್ಥಿಕ ಅಸ್ತ್ರ’ವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ. ಈ ಜಲಸಂಧಿಯ ಮೇಲೆ ತನ್ನ ಪೂರ್ಣ ಅಧಿಕಾರವನ್ನು ಅಂತರಾಷ್ಟ್ರೀಯ ಸಮುದಾಯವು ಮಾನ್ಯ ಮಾಡಬೇಕು ಎಂಬ ಬೇಡಿಕೆಯನ್ನು ಇರಾನ್ ಇಟ್ಟಿದ್ದು, ಇದರ ಹಿಂದೆ ಮಾಸಿಕ 4.5 ಶತಕೋಟಿ ಡಾಲರ್ಗಳಷ್ಟು (ಅಂದಾಜು ₹37,000 ಕೋಟಿಗೂ ಅಧಿಕ) ಬೃಹತ್ ಆದಾಯದ ಲೆಕ್ಕಾಚಾರವಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿ ಅಂತರಾಷ್ಟ್ರೀಯ ಹಡಗಿನಿಂದ ಇರಾನ್ ಸುಮಾರು 20 ಲಕ್ಷ ಅಮೆರಿಕನ್ ಡಾಲರ್ (ಅಂದಾಜು ₹16 ಕೋಟಿ) ಶುಲ್ಕ ಅಥವಾ ‘ಟೋಲ್’ ವಸೂಲಿ ಮಾಡುವ ಪ್ರಸ್ತಾವನೆ ಮುಂದಿಟ್ಟಿದೆ. ಈ ಮೂಲಕ ತಿಂಗಳಿಗೆ ಕನಿಷ್ಠ 4.5 ಶತಕೋಟಿ ಡಾಲರ್ ಹಣವನ್ನು ತನ್ನ ಖಜಾನೆಗೆ ತುಂಬಿಸಿಕೊಳ್ಳುವುದು ಇರಾನ್ ಗುರಿಯಾಗಿದೆ.
ತಾನು ಅನುಮತಿಸಿದ ಹಡಗುಗಳಿಗೆ ಮಾತ್ರ ಈ ಹಾದಿಯಲ್ಲಿ ಸಂಚರಿಸಲು ಅವಕಾಶ ನೀಡುವುದಾಗಿ ಹೇಳಿರುವ ಇರಾನ್, ಈ ಭಾಗದಲ್ಲಿ ತನ್ನ ‘ಸಾರ್ವಭೌಮ ಅಧಿಕಾರ’ವನ್ನು ಜಗತ್ತು ಒಪ್ಪಿಕೊಳ್ಳಬೇಕು ಎಂದು ಹಠ ಹಿಡಿದಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆಯೇ ಇರಾನ್ ಈ ಬಾರ್ಗೇನಿಂಗ್ ಪ್ಲಾನ್ ಮಾಡಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ ಒಟ್ಟು ತೈಲ ರಫ್ತಿನ ಶೇ. 20ರಷ್ಟು ಭಾಗ ಸಾಗುತ್ತದೆ. ಇರಾನ್ ಈ ಹಾದಿಯನ್ನು ನಿಯಂತ್ರಿಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುವ ಆತಂಕ ಎದುರಾಗಿದೆ.








