ಬೆಳಗಾವಿ : ಬ್ಯಾಕ್ಟಿರೀಯಾ ಸೋಂಕು ಗಳಲೆ ರೋಗ (ಹೆಮರೇಜಿಕ್ ಸೆಪ್ಟಿ ಸೀಮಿಯಾ)ದಿಂದ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಸಾವನ್ನಪ್ಪಿದ್ದು, ತಮಗೂ ನೋವು ತಂದಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಚಿಗುರು ತಿನ್ನುವ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹೊರ ನೋಟಕ್ಕೆ ಸೋಂಕಿನ ಲಕ್ಷಣವೂ ಕಾಣುವುದಿಲ್ಲ. ಈ ಸೋಂಕು ಬಂದ 6 ರಿಂದ 24 ಗಂಟೆಗಳಲ್ಲಿ ಅಥವಾ 8ರಿಂದ 24 ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸೋಂಕು ತಗುಲಿದ ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸುವ ಕಾರಣ ಹೆಚ್ಚಿನ ಸಂಖ್ಯೆ ಕೃಷ್ಣಮೃಗ ಮೃತಪಟ್ಟಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಕಿರು ಮೃಗಾಲಯದಲ್ಲಿ ನವೆಂಬರ್ 13ರಿಂದ 17ರವರೆಗೆ ಒಟ್ಟು 31 ಕೃಷ್ಣಮೃಗಗಳು ಸಾವಿಗೀಡಾಗಿವೆ. ಮೃಗಾಲಯದ ವೈದ್ಯರು, ಪಶು ಸಂಗೋಪನಾ ಇಲಾಖೆಯ ಸ್ಥಳೀಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ಪಶುವೈದ್ಯಕೀಯ ಜೈವಿಕ ಸಂಸ್ಥೆಗೆ ಮಾದರಿ ಕಳಿಸಿದ್ದರು. ಎಲ್ಲ ಕೃಷ್ಣಮೃಗಗಳೂ ಗಳಲೆ ರೋಗದಿಂದಲೇ ಮೃತಪಟ್ಟಿರುವುದು ದೃಢಪಟ್ಟಿದೆ ಎಂದರು.
ತಮಗೆ ಕೃಷ್ಣಮೃಗಗಳ ಸಾವಿನ ವಿಷಯ ತಿಳಿದ ಕೂಡಲೇ ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕಳುಹಿಸಿದ್ದು, 7 ಬದುಕುಳಿದಿವೆ ಎಂದ ಅವರು, ಈ ಸೋಂಕು ಮೃಗಾಲಯದ ಬೇರೆ ಯಾವುದೇ ಪ್ರಾಣಿಗಳಿಗೆ ಪಸರಿಸದಂತೆ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲ ಅಗತ್ಯ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿತ್ತು. ಕಟ್ಟುನಿಟ್ಟಾಗಿ ನೈರ್ಮಲ್ಯ ಕ್ರಮ ಕೈಗೊಳ್ಳಲಾಯಿತು. ಇದು ಕೈಮೀರಿ ಸಂಭವಿಸಿರುವ ಸಾವು, ಮೇಲ್ನೋಟಕ್ಕೆ ಕರ್ತವ್ಯಲೋಪ, ನಿರ್ಲಕ್ಷ್ಯ ಕಂಡು ಬಂದಿಲ್ಲ ಎಂದು ವಿವರಿಸಿದರು.
ರಾಜ್ಯದ 9 ಮೃಗಾಲಯಗಳಲ್ಲಿ ಒಟ್ಟಾರೆ 322 ಕೃಷ್ಣಮೃಗಗಳಿದ್ದು, ಈ ಪ್ರಾಣಿಗಳಿಗೆ ರೋಗ ಬಾರದಂತೆ ಎಚ್ಚರ ವಹಿಸಲಾಯಿತು. ಮೃಗಾಲಯಗಳಲ್ಲಿ ಬಹುತೇಕ ಎಲ್ಲ ಪ್ರಾಣಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು (ಲಸಿಕೆ) ಹಾಕಲಾಗುತ್ತದೆ. ಆದರೆ ಕೃಷ್ಣ ಮೃಗಳಿಗೆ ಲಸಿಕೆ ನೀಡುವುದು ಕಷ್ಟಸಾಧ್ಯ. ಕಾರಣ ಕೃಷ್ಣಮೃಗ ಬಹು ಸೂಕ್ಷ್ಮ ಜೀವಿ. ಕೃಷ್ಣಮೃಗಗಳನ್ನು ಹಿಡಿದು ಲಸಿಕೆ ಹಾಕಿದರೆ ಅವು ಬಂಧನ ಭೀತಿ (ಕ್ಯಾಪ್ಚರ್ ಮಯೋಪತಿ) ಯಿಂದ ಹೃದಯಾಘಾತಕ್ಕೂ ಒಳಗಾಗುತ್ತವೆ. ಮೃಗಾಲಯದಲ್ಲಿರುವ ಕೃಷ್ಣಮೃಗಗಳು ಚಿರತೆ, ಹುಲಿಯ ಶಬ್ದ ಕೇಳಿ ಇಲ್ಲವೇ ತಮ್ಮ ಪಂಜರಕ್ಕೆ ನಾಯಿ ಬಂದಿದ್ದನ್ನು ನೋಡಿ ಹೆದರಿ ಸಾಯುತ್ತವೆ. ಕೇರಳದಲ್ಲಿ ನಾಯಿ ಬಂದ ಕಾರಣಕ್ಕೆ ಸಾವು ಸಂಭವಿಸಿತ್ತು ಎಂದು ತಿಳಿಸಿದರು.
ನೀರು, ಆಹಾರ ಕೆಲವೊಮ್ಮೆ ಗಾಳಿಯಿಂದಲೂ ಹರಡುವ ಈ ಕಾಯಿಲೆ ಬರುತ್ತದೆ. ಗಳಲೆ ರೋಗಕ್ಕೆ ಜಾನುವಾರುಗಳೂ ಸಾವಿಗೀಡಾಗುತ್ತವೆ. ನನಗೆ ನೆನಪಿರುವಂತೆ ಕೊಪ್ಪಳ ತಾಲೂಕಿನಲ್ಲಿ ಗಳಲೆ ರೋಗಕ್ಕೆ ಒಂದೇ ದಿನ 5-6 ಹಸುಗಳು ಮೃತಪಟ್ಟಿದ್ದವು. 4 ದಿನಗಳಲ್ಲಿ 11 ದನ, ಕರು ಸಾವಿಗೀಡಾಗಿದ್ದವು. ಪತ್ರಿಕೆಯಲ್ಲಿ ಬಂದಿರುವ ವರದಿಯಂತೆ ಇತ್ತೀಚೆಗೆ ಜಾರ್ಖಂಡ್ ನ ಜೆಮ್ಷೆಡ್ಪುರದ ಟಾಟಾ ಜೈವಿಕ ಉದ್ಯಾನವನದಲ್ಲಿ ಹೆಮೊರೆಜಿಕ್ ಸೆಪ್ಪಿಸೀಮಿಯಾ ಕಾಯಿಲೆಯಿಂದ 10 ಕೃಷ್ಣಮೃಗ ಮೃತಪಟ್ಟಿದೆ ಎಂದರು.
31 ಕೃಷ್ಣಮೃಗಗಳ ಸಾವಿನ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂದು ಸದಸ್ಯ ಡಾ. ತಳವಾರ ಸಾಬಣ್ಣ ಹೇಳಿದಾಗ ಅಸಮಾಧಾನಗೊಂಡ ಸಚಿವರು, ಕೊರೊನಾ ಸಮಯದಲ್ಲಿ ಚಾಮರಾಜನಗರದಲ್ಲಿ ಒಂದೇ ದಿನ 36 ಜನರು ಆಕ್ಸಿಜನ್ ಲಭಿಸದೆ ಮೃತಪಟ್ಟರು, ನಿಮ್ಮ ಸರ್ಕಾರಕ್ಕೂ ಹೀಗೆ ಹೇಳಿದರೆ ಆಗುತ್ತದೆಯೇ ಎಂದು ಪ್ರಶ್ನಿಸಿದರು. ಇಂತಹ ವಿಚಾರಗಳನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸುವುದು ಸರಿಯಲ್ಲ ಎಂದು ತಿಳಿಸಿದರು.
ರಾಜ್ಯದ ಎಲ್ಲ ಮೃಗಾಲಯಗಳಲ್ಲಿ 2021-22ರಿಂದ ಇಲ್ಲಿಯವರೆಗಿನ ಅಂಕಿ ಅಂಶ ನೋಡುವುದಾದರೆ, 2021-22 ರಲ್ಲಿ ಶೇ.6.2ರಷ್ಟು ವನ್ಯಜೀವಿಗಳು ಮೃಗಾಲಯದಲ್ಲಿ ಮೃತಪಟ್ಟಿದ್ದವು. 2022-23ರಲ್ಲಿ ಮರಣ ಪ್ರಮಾಣ ಶೇ.4.5 ಆಗಿತ್ತು. 2023-24ರಲ್ಲಿ ಶೇ.4.76 2024-25ರಲ್ಲಿ ಶೇ.3.25 ಹಾಗೂ 2025-26ರಲ್ಲಿ ಶೇ.2.42ರಷ್ಟು ವನ್ಯಜೀವಿಗಳು ಮೃಗಾಲಯದಲ್ಲಿ ಮೃತಪಟ್ಟಿವೆ ಎಂದು ವಿವರ ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿದ್ದ 38 ಕೃಷ್ಣಮೃಗಳ ಪೈಕಿ 31 ಸಾವಿಗೀಡಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿರುವ ಎಲ್ಲಾ ಮೃಗಾಲಯಗಳ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.
ಕರ್ನಾಟಕದ ಮೃಗಾಲಯಗಳಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟನೆ ನೀಡಿದ ಅವರು, ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಲಾಗಿದೆ, ಉತ್ತಮ ಕಾರ್ಯ ಮಾಡುತ್ತಿರುವವರ ಧ್ರುತಿಗೆಡಿಸುವುದು ಸರಿಯಲ್ಲ. ಆದಾಗ್ಯೂ ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು ಎಂದೂ ತಿಳಿಸಿದರು.








